ಮೈಸೂರು :ಈ ಹಿಂದೆ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದಾಗ ಕೆಎಂಎಫ್ ಅನ್ನು ಅಮುಲ್ ಜೊತೆ ವಿಲೀನ ಮಾಡುವ ಬಗ್ಗೆ ಹೇಳಿದ್ದರು. ಇದೀಗ ಕೆಎಂಎಫ್ ನಂದಿನಿಯನ್ನು ಗುಜರಾತ್ನ ಅಮುಲ್ ಜೊತೆ ವಿಲೀನ ಮಾಡಲು ಬಿಜೆಪಿಯಿಂದ ಸಂಚು ನಡೆಯುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಇಂದು ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಏನನ್ನು ಮಾಡುವುದಿಲ್ಲ ಎಂದು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಈಗ ಕೆಎಂಎಫ್ ಅನ್ನು ಅಮುಲ್ ಜೊತೆ ವಿಲೀನ ಮಾಡಲು ಸಂಚು ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಸರ್ಕಾರಿ ಕಛೇರಿಗಳು ಆನ್ಲೈನ್ ಮೂಲಕ ಅಮುಲ್ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದು ಇದು ಸಂಚಿನ ಭಾಗ. ಈ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಜನ ಸೇರುತ್ತಿಲ್ಲ. ಆದ್ದರಿಂದ ಸಿನಿಮಾ ನಟರ ಮೊರೆ ಹೋಗುತ್ತಿದ್ದು, ನಟ ಸುದೀಪ್ ಪತ್ರಿಕಾ ಗೋಷ್ಠಿಯಲ್ಲಿ ಬೊಮ್ಮಾಯಿ ಮಾಮನ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಕೆಲವು ನಟಿಯರು ಸಹ ಪ್ರಚಾರಕ್ಕೆ ಬರುತ್ತಿದ್ದಾರೆ. ಬಿಜೆಪಿಯ ಟಾಪ್ ಸ್ಟಾರ್ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಬಂದರೂ ಜನ ಸಭೆಗೆ ಸೇರುತ್ತಿಲ್ಲ. ಅದರೂ ನರೇಂದ್ರ ಮೋದಿಯವರು ಬಂಡೀಪುರಕ್ಕೆ ಚುನಾವಣಾ ಸಂದರ್ಭದಲ್ಲಿ ಬರುತ್ತಿದ್ದು, ಪ್ರಾಣಿಗಳಿಗೆ ಪ್ರಚಾರ ಮಾಡಲು ಬರುತ್ತಿದ್ದಾರೆಯೇ ಎಂದು ವ್ಯಂಗ್ಯವಾಡಿದರು.