ಮೈಸೂರು:"ಚಾಮುಂಡೇಶ್ವರಿ ಕ್ಷೇತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದರೂ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದೀರಿ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೆಗೌಡ ನೆಪಮಾತ್ರ, ನಾನೇ ಇಲ್ಲಿ ಅಭ್ಯರ್ಥಿ ಎಂದೇ ಭಾವಿಸಿ. ಹಾಗಾಗಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಅವಕಾಶವಾದಿ ಜಿ.ಟಿ.ದೇವೆಗೌಡನನ್ನು ಸೋಲಿಸಿ" ಎಂದು ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೆಗೌಡ ಸಮರ್ಥ ಅಭ್ಯರ್ಥಿ ಅಲ್ಲದಿದ್ದರೂ, ಈ ಕ್ಷೇತ್ರಕ್ಕೆ 11 ಮಂದಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಅವರೆಲ್ಲರೂ ಸಮರ್ಥರೆೇ. ಈಗ ತಮ್ಮಲ್ಲಿರುವ ಭಿನ್ನಮತ ಮರೆತು, ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಈ ಬಾರಿ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ಮಹತ್ವದ ಸ್ಥಾನ ಪಡೆದಿದೆ. ನಾವು ಯಾರೂ ಇದನ್ನು ಹಗುರವಾಗಿ ಪರಿಗಣಿಸಬಾರದು. ಇಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ, ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಜಿ.ಟಿ.ದೇವೇಗೌಡ ಅವಕಾಶವಾದಿ:ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರಲು ಮುಂದಾಗಿದ್ದ. ನನ್ನ ಜೊತೆ ಮಾತುಕತೆ ನಡೆಸಿದ್ದ. ನಂತರ ಅಂತರ ಕಾಯ್ದುಕೊಂಡ. ಈಗ ಜೆಡಿಎಸ್ ಅಭ್ಯರ್ಥಿಯಾಗಿದ್ದಾನೆ. ಜೆಡಿಎಸ್ ಯಾವುದೇ ಕಾರಣಕ್ಕೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್‌ನವರು ನನ್ನನ್ನು ಹೊರ ಹಾಕಿದರು. ಆಗ ಜಿ.ಟಿ.ದೇವೇಗೌಡ ಮಂತ್ರಿ ಆಗುವ ಆಸೆಯಿಂದ ಅಲ್ಲೇ ಉಳಿದುಕೊಂಡ. ಅವರನ್ನು ಹುಣಸೂರಿನಲ್ಲಿ ಗೆಲ್ಲಿಸಿದವರು ಯಾರು ಎಂದು ಹೇಳಲಿ ಎಂದರು.