ಮೈಸೂರು:ಕಳೆದ ಎಪ್ರಿಲ್30ರಂದು ಮೈಸೂರಿನ ಗನ್ ಹೌಸ್ ವೃತ್ತದಿಂದ ಹೈವೇ ವೃತ್ತದವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಕೆ. ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಸ್ವಚ್ಛಗೊಳಿಸಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮೈಸೂರು ನಗರದಲ್ಲಿ ರೋಡ್ ಶೋ ನಡೆಸಿದ ಮಾರ್ಗ ಅಪವಿತ್ರವಾಗಿದೆ ಎಂದು ಆರೋಪಿಸಿ, ರೋಡ್ ಶೋ ನಡೆಸಿದ ಮಾರ್ಗದ ರಾಜ ಮಾರ್ಗವನ್ನು ಸಗಣಿ, ಗಂಜಲದಿಂದ ಕಾಂಗ್ರೆಸ್ ಕಾರ್ಯಕರ್ತರು ಕ್ಲೀನ್ ಮಾಡಿದ್ದಾರೆ. ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ, ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಸಾಗುವ ದಾರಿಯಲ್ಲಿ ಬಂದು ಅಪವಿತ್ರ ಮಾಡಿದ್ದಾರೆ ಎಂದು ದೂರಿದರು.
ಇದರಿಂದ ಸಾಗಿದ ಮಾರ್ಗವನ್ನು ಶುಚಿಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ವ್ಯಂಗ್ಯವಾಡಿದರು. ರಾಜ ಮಹಾರಾಜರು ಸಾಗಿದ್ದ ಮಾರ್ಗ, ಈಗ ತಾಯಿ ಚಾಮುಂಡೇಶ್ವರಿ ಸಾಗುವ ಮಾರ್ಗ. ಅಂತಹ ಮಾರ್ಗದಲ್ಲಿ ಮೋದಿ ಸಾಗಿದ್ದು, ಅಪಶಕುನವಾಗಿದ್ದರಿಂದ, ಇದರಿಂದಾಗಿಯೇ ಬಿಜೆಪಿ ಸೋತಿದೆ. ಚಾಮುಂಡೇಶ್ವರಿ ಶಾಪದಿಂದ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ ಎಂದು ಕಾರ್ಯಕರ್ತರು ಹೇಳಿದರು.
ದಸರಾದಲ್ಲಿ ಜಂಬೂಸವಾರಿ ಸಾಗುವ ರಾಜ ಮಾರ್ಗವನ್ನು ರೋಡ್ ಶೋ ಮಾಡಿ ಅಪವಿತ್ರಗೊಳಿಸಲಾಗಿದೆ. ಮೈಸೂರು ರಾಜಮನೆತನ ಮತ್ತು ಚಾಮುಂಡೇಶ್ವರಿ ದೇವಿಯ ಭಕ್ತರಾದ ನಮಗೆ ಈ ಘಟನೆಯಿಂದ ಬಹಳ ನೋವಾಗಿದೆ ಹಾಗೂ ಬೇಸರವಾಗಿದೆ ಎಂದು ಶುದ್ಧೀಕರಣ ಕಾರ್ಯದ ನೇತೃತ್ವ ವಹಿಸಿದ್ದ ನಗರದ ವಿದ್ಯಾರಣ್ಯಪುರ ನಿವಾಸಿ ಕಂಸಾಳೆ ರವಿ ಹೇಳಿದರು.