ಡಿ.ಕೆ ಶಿವಕುಮಾರ್ ಮಾಧ್ಯಮಗೋಷ್ಠಿ ಮೈಸೂರು: ರಾಜ್ಯದಲ್ಲಿ ಮೇ 13 ಚುನಾವಣಾ ಫಲಿತಾಂಶದ ದಿನ. ಅಂದು ಬಿಜೆಪಿ ಸರ್ಕಾರದ ಶವಯಾತ್ರೆ ನಡೆಯಲಿದೆ. ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಈ ಬಾರಿ ಕಾಂಗ್ರೆಸ್ 150 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ. ಯಾವುದೇ ಕುತಂತ್ರಕ್ಕೆ ಬೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿದ ಡಿಕೆಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ಶವಯಾತ್ರೆ ನಡೆಯಲಿದೆ: "ಬಿಜೆಪಿ ಸರ್ಕಾರ ಮೀಸಲಾತಿ ಬಗ್ಗೆ ಜನರಿಗೆ ಚಾಕೊಲೇಟ್ ಕೊಟ್ಟು ವಿಶ್ವಾಸ ದ್ರೋಹ ಮಾಡಿದೆ. ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿದೆ. ಆದರೆ, ಸರ್ಕಾರದ ಮೀಸಲಾತಿ ನೀತಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಬರೀ ಸುಳ್ಳು ಹಾಗೂ ಮೋಸ ಮಾಡಿಕೊಂಡು ಬಿಜೆಪಿ ಸರ್ಕಾರ ಕಾಲ ಕಳೆಯುತ್ತಿದೆ. ಕರ್ನಾಟಕದ ಜನರು ದಡ್ಡರಲ್ಲ. ಒಕ್ಕಲಿಗರು ಹಾಗೂ ಲಿಂಗಾಯತರನ್ನ ಭಿಕ್ಷುಕರಾಗಿ ಮಾಡಲಾಗುತ್ತಿದೆ. ಮೇ 13 ಚುನಾವಣಾ ಫಲಿತಾಂಶದ ದಿನ ಬಿಜೆಪಿ ಸರ್ಕಾರದ ಶವಯಾತ್ರೆ ನಡೆಯಲಿದೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಕೆಟ್ಟು ಹೋಗಿದೆ" ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಮಿಷನ್ 150 ಆಯ್ತು ಈಗ ಟಾರ್ಗೆಟ್ 50: ಕರುನಾಡ ಗೆಲ್ಲಲು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು..?
ಕಾಂಗ್ರೆಸ್ 150 ಸ್ಥಾನ ಗೆಲ್ಲಲಿದೆ:ಕರ್ನಾಟಕವನ್ನು ಬಿಜೆಪಿ ಸರ್ಕಾರ ಭ್ರಷ್ಟರ ರಾಜಧಾನಿ ಮಾಡಿದೆ. ಶೇ 40ರಷ್ಟು ಕಮಿಷನ್ ಸರ್ಕಾರ ಈ ಬಾರಿ 40 ಸೀಟಿಗೆ ಮೀಸಲಾಗುತ್ತದೆ. ನನ್ನ ವಿರುದ್ಧ ತಂತ್ರ-ಕುತಂತ್ರ ಮಾಡುತ್ತಿದ್ದಾರೆ. ಅದಕ್ಕೆಲ್ಲ ಹೆದರುವುದಿಲ್ಲ. ನಾವು 150 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದ್ದೇವೆ. ಈ ಸರ್ಕಾರದ ಆಯಸ್ಸು 13 ದಿನ ಮಾತ್ರ. ಆನಂತರ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರಲಿದ್ದೇವೆ ಎಂದರು.
ಡಿಕೆಶಿ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಮಾಧ್ಯಮಗೋಷ್ಠಿ 40 ಪರ್ಸೆಂಟ್ ಸರ್ಕಾರ:ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ "ಕರ್ನಾಟಕದಲ್ಲಿ ಇರುವುದು 40 ಪರ್ಸೆಂಟ್ ಸರ್ಕಾರ. ಇದು ಜನರನ್ನು ಮೀಸಲಾತಿ ವಿಚಾರದಲ್ಲಿ ದಿಕ್ಕು ತಪ್ಪಿಸಿ ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ಸರ್ವೇ ಮಾಡಿಸಲಾಗುವುದು. ಈಗಾಗಲೇ ಜಾತಿ ಗಣತಿ ಮಾಡಿಸಲಾಗಿದೆ. ಅದರ ಆಧಾರದ ಮೇಲೆ ಮೀಸಲಾತಿ ನಿರ್ಧಾರ ಮಾಡಲಾಗುವುದು. ಮೀಸಲಾತಿ ಬಗ್ಗೆ 50 ಪರ್ಸೆಂಟ್ ಸೀಲಿಂಗ್ ತೆಗೆದರೆ, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದರು.
ವಿ.ಸೋಮಣ್ಣ ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯುವ ಬಗ್ಗೆ, ಫೋನ್ ನಲ್ಲಿ ನಡೆಸಿದ ಸಂಭಾಷಣೆ ಆಡಿಯೋ ವೈರಲ್ ಬಗ್ಗೆ ಕಾಂಗ್ರೆಸ್ ಪಕ್ಷ ಸಂಜೆ ನಿರ್ಧಾರ ಕೈಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಇದನ್ನೂ ಓದಿ:ಶತಾಯಗತಾಯ ಶೆಟ್ಟರ್ಗೆ ಸೋಲುಣಿಸೋದೇ ನಮ್ಮ ಗುರಿ: ಬಿ ಎಸ್ ಯಡಿಯೂರಪ್ಪ