ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕ ಮೈಸೂರು: ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರೂ ಅಣ್ಣ ತಮ್ಮ ಇದ್ದಂತೆ. ಈ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರನ್ನು ಯಡಿಯೂರಪ್ಪ ಎತ್ತಿ ಕಟ್ಟಿದ್ದಾರೆ ಎಂಬ ಕಾಂಗ್ರೆಸ್ನ ಟ್ವೀಟ್ ಒಂದು ಕುತಂತ್ರ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮೈಸೂರಿನಲ್ಲಿ ಹೇಳಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆಯಿಂದ ರಾಜ್ಯದಲ್ಲಿ ಬಿಜೆಪಿ ನಾಲ್ಕು ತಂಡಗಳಲ್ಲಿ ವಿಜಯಯಾತ್ರೆ ಆರಂಭಿಸುತ್ತಿದ್ದು, ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಿಂದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ವಿಜಯಯಾತ್ರೆಗೆ ಚಾಲನೆ ನೀಡಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಆಗಮಿಸಿದ್ದೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಇಬ್ಬರು ಅಣ್ಣ ತಮ್ಮಂದಿರಿದ್ದ ಹಾಗೆ. ಈ ಮಧ್ಯೆ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರನ್ನು ಯಡಿಯೂರಪ್ಪ ಎತ್ತಿಕಟ್ಟಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್, ಕುತಂತ್ರದಿಂದ ಕೂಡಿದೆ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಿತ್ತಾಟ ನಡೆಯುತ್ತಿದ್ದು, ಆ ರೀತಿ ಕಿತ್ತಾಟ ಬಿಜೆಪಿಯಲ್ಲೂ ನಡೆಯಲಿ ಎಂದು ಬಯಸುತ್ತಿದ್ದಾರೆ ಎಂದ ಈಶ್ವರಪ್ಪ, ಸರ್ಕಾರಿ ನೌಕರರಿಗೆ ಬಿಜೆಪಿಯವರು ನೀಡಿದಷ್ಟು ಸೌಲಭ್ಯಗಳನ್ನು ಬೇರೆ ಯಾರೂ ನೀಡಲಿಲ್ಲ. ಹೀಗಿದ್ದರೂ ಮುಷ್ಕರ ಮಾಡುತ್ತೇವೆ ಎಂದರೆ ಏನು ಹೇಳುವುದು ಎಂದು ಸರ್ಕಾರಿ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಯಡಿಯೂರಪ್ಪಗೆ ಅವಮಾನ ಮಾಡಿಲ್ಲ:ಯಡಿಯೂರಪ್ಪ ಅವರನ್ನು ಅವಮಾನ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ಪಡೆದರು ಎಂಬ ಕಾಂಗ್ರೆಸ್ ಹೇಳಿಕೆ ರಾಜಕೀಯ ಕುತಂತ್ರದಿಂದ ಕೂಡಿದ್ದು, ಯಡಿಯೂರಪ್ಪನವರೇ ಸ್ವಯಂ ರಾಜೀನಾಮೆ ನೀಡಿದ್ದರು. ಆದರೆ ಕಾಂಗ್ರೆಸ್ ನಿಜಲಿಂಗಪ್ಪ ಹಾಗೂ ವೀರೆಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಅವಮಾನ ಮಾಡಿತ್ತು. ಇವೆರಡಕ್ಕೂ ವ್ಯತ್ಯಾಸ ಇದೆ. ಇದನ್ನು ರಾಜ್ಯದ ಜನ ನೋಡುತ್ತಿದ್ದಾರೆ ಎಂದರು.
ಇದಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಅವರ ಬಿಜೆಪಿಯ ರಾಜ್ಯ ನಾಯಕರಲ್ಲಿ ಗಂಡಸರೇ ಇಲ್ಲ. ಎಲ್ಲರನ್ನು ದೆಹಲಿಯಿಂದಲೇ ಕರೆಸುತ್ತಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಜೆಡಿಎಸ್ ಹಾಗೂ ಕಾಂಗ್ರೆಸ್ನಲ್ಲಿ ನಾಯಕರಿಲ್ಲ. ಬಿಜೆಪಿಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಮಟ್ಟದಲ್ಲಿ ನಾಯಕರಿದ್ದಾರೆ ಎಂದು ತಿರುಗೇಟು ನೀಡಿದರು.
ಟಿಕೆಟ್ ನೀಡುವುದು ಪಕ್ಷಕ್ಕೆ ಬಿಟ್ಟಿದ್ದು:ಸಚಿವ ಸ್ಥಾನ ನೀಡುವುದು, ಟಿಕೇಟ್ ನೀಡುವುದು ಅಥವಾ ಬಿಡುವುದು ಪಕ್ಷದ ತೀರ್ಮಾನ. ಎಲ್ಲರೂ ಮಂತ್ರಿಯಾಗಬೇಕೆಂದು ಬರೆದು ಕೊಟ್ಟಿಲ್ಲ. ಎಲ್ಲರೂ ಮಂತ್ರಿಯಾಗಲೂ ಸಾಧ್ಯವಿಲ್ಲ. ಟಿಕೆಟ್ ನೀಡುವ ವಿಚಾರ ಕೇಂದ್ರ ಹಾಗೂ ರಾಜ್ಯ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಗುರಿ 150 ಸ್ಥಾನ ಗೆಲ್ಲುವುದು. ಈ ಮಧ್ಯೆ ಯಾರು ಯಾರು ಎಲ್ಲೆಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಮಗೆ ಮುಖ್ಯ. ಎಲ್ಲ ತೀರ್ಮಾನ ಪಕ್ಷಕ್ಕೆ ಬಿಟ್ಟಿದ್ದು. ನಮ್ಮದು ಸಂಘಟನೆ ಆಧಾರಿತ ಪಕ್ಷ, ನಮ್ಮಲ್ಲಿ ಚಮಚ ಗಿರಿ, ಜಾತಿ, ದುಡ್ಡು ನಡೆಯುವುದಿಲ್ಲ. ಗೆಲ್ಲುವ ಸಾಮರ್ಥ್ಯ ಇರುವವರನ್ನು ಗುರುತಿಸಿ ಪಕ್ಷ ಟಿಕೆಟ್ ನೀಡುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ, ಆದರೆ ಈ ರೀತಿ ಶಿಸ್ತು ಜೆಡಿಎಸ್, ಕಾಂಗ್ರೆಸ್ನಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಲಿಂಗಾಯತ ಸಮುದಾಯ ಸಿಡಿದೇಳುತ್ತೆ ಎಂದಾಗ ಬೊಮ್ಮಾಯಿಯನ್ನು ಸಿಎಂ ಮಾಡಿದ್ರು: ಎಂಬಿಪಿ