ಮೈಸೂರು :ಶಿಷ್ಟಾಚಾರ ಉಲ್ಲಂಘನೆ ಸಂಬಂಧ ಮೈಸೂರು ಸಚಿವರ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಸ್ಪೀಕರ್ಗೆ ದೂರು ನೀಡುತ್ತೇವೆ ಎಂದು ಮೂವರು ಕಾಂಗ್ರೆಸ್ ಶಾಸಕರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಇಂದು ನಗರದಲ್ಲಿ ಮೂವರು ಕಾಂಗ್ರೆಸ್ ಶಾಸಕರಾದ ಹುಣಸೂರಿನ ಹೆಚ್.ಪಿ. ಮಂಜುನಾಥ್, ವರುಣ ಕ್ಷೇತ್ರದ ಯತೀಂದ್ರ ಸಿದ್ದರಾಮಯ್ಯ, ಹೆಚ್ ಡಿ ಕೋಟೆಯ ಅನಿಲ್ ಚಿಕ್ಕಮಾದು ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ನಿನ್ನೆ ಮೈಸೂರಿನಲ್ಲಿ ಮಂತ್ರಿಗಳಾದ ಎಸ್ ಟಿ ಸೋಮಶೇಖರ್ ಹಾಗೂ ಭೈರತಿ ಬಸವರಾಜರವರು, ಸಿದ್ದರಾಮಯ್ಯ ಕಾಲದಲ್ಲಿ ಅನುದಾನ ಬಿಡುಗಡೆ ಮಾಡಿ ನಿರ್ಮಾಣವಾಗಿರುವ ಜಲಭವನ ಕಟ್ಟಡವನ್ನ ಉದ್ಘಾಟನೆ ಮಾಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರನ್ನ ಕರೆಸಿಲ್ಲ ಹಾಗೂ ಗ್ರಾಮಾಂತರ ಪ್ರದೇಶದ ಶಾಸಕರಿಗೆ ಆಹ್ವಾನ ನೀಡಿಲ್ಲ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಈ ಸಂಬಂಧ ಸ್ಪೀಕರ್ಗೆ ದೂರು ನೀಡಿ ಹಕ್ಕು ಚ್ಯುತಿ ಮಂಡಿಸುತ್ತೇವೆ. ಇನ್ನು ಮುಂದೆ ಸಹಕಾರ ಸಚಿವರಿಗೆ ಯಾವುದೇ ರೀತಿಯ ಸಹಕಾರ ನೀಡುವುದಿಲ್ಲ. ಮೈಸೂರಿಗೆ ಬಂದಾಗ ಕಪ್ಪು ಬಾವುಟ ತೋರಿಸುತ್ತೇವೆ ಎಂದು ಹುಣಸೂರು ಕಾಂಗ್ರೆಸ್ ಶಾಸಕ ಹೆಚ್.ಪಿ. ಮಂಜುನಾಥ್ ಹೇಳಿದರು.
ಅನುದಾನ ಹಂಚಿಕೆಯಲ್ಲಿ ತಾರತಮ್ಯ : ಯತೀಂದ್ರ ಸಿದ್ದರಾಮಯ್ಯ
ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸರ್ಕಾರದಿಂದ ತಾರತಮ್ಯ ಮಾಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಮುಂದುವರೆದ ಕಾಮಗಾರಿಗೆ ಎಸ್ಇಪಿ ಅನುದಾನದಲ್ಲಿ 9 ಕೋಟಿ ರೂ. ಮತ್ತು ಹೊಸ ಕಾಮಗಾರಿಗೆ 7 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು.
ಆ ಪೈಕಿ ಪಿರಿಯಾಪಟ್ಟಣಕ್ಕೆ 9 ಕೋಟಿ ರೂ. ಹಾಗೂ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರನ್ನ ನಿರ್ಲಕ್ಷ್ಯ ಮಾಡಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ವಿವರಿಸುತ್ತೇನೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ವಿವರಿಸಿದರು.
ನಮ್ಮಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ಆದರೂ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಗ್ರಾಮೀಣ ಭಾಗದ ಶಾಸಕರನ್ನ ಕರೆದಿಲ್ಲ, ಇದು ಆ ಕ್ಷೇತ್ರದ ಜನರಿಗೆ ಮಾಡಿರುವ ಅಗೌರವ, ಇದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ ಎಂದರು.
ಇದೇ ಸಂದರ್ಭದಲ್ಲಿ ಹೆಚ್ ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಬಿಜೆಪಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಿಂದುಳಿದ ಕ್ಷೇತ್ರವಾದ ಹೆಚ್‌ಡಿಕೋಟೆಯನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಯಾವುದೇ ಇಲಾಖೆಗೆ ಅನುದಾನ ನೀಡಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಂದ ಅನುದಾನಗಳನ್ನು ಬಿಟ್ಟರೆ ಬಿಜೆಪಿ ಸರ್ಕಾರದಲ್ಲಿ ಯಾವುದೇ ಅನುದಾನ ಬಂದಿಲ್ಲ ಎಂದು ಆರೋಪಿಸಿದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ