ಮೈಸೂರು:ಜೆಡಿಎಸ್ ಮತ್ತು ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಳ್ಳುತ್ತಿದ್ದ ಮೈಸೂರು ಜಿಲ್ಲೆ ಈ ಬಾರಿ ಕಾಂಗ್ರೆಸ್ ಪಾಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ, ಜೆಡಿಎಸ್ 3 ಸ್ಥಾನ ಕಳೆದುಕೊಂಡು ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯಭೇರಿ ಬಾರಿಸಿ ಕಳಪೆ ಪ್ರದರ್ಶನ ತೋರಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೊಚ್ಚಿ ಹೋಗಿವೆ. ಈ ಅಲೆ ಮೈಸೂರು ಜಿಲ್ಲೆಗೂ ಅಪ್ಪಳಿಸಿದೆ. ಕಳೆದ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕಾಂಗ್ರೆಸ್, ಈ ಬಾರಿ 11 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಎರಡು ಹಾಗೂ ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ.
ಗೆದ್ದವರು ಯಾರು :ಈ ಬಾರಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ವರುಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ, ಕೆ ಆರ್ ನಗರದಿಂದ ರವಿಶಂಕರ್, ಎಚ್ ಡಿ. ಕೋಟೆಯಿಂದ ಅನಿಲ್ ಚಿಕ್ಕಮಾದು, ನಂಜನಗೂಡಿನಿಂದ ದರ್ಶನ್ ಧೃವನಾರಾಯಣ್, ಟಿ.ನರಸೀಪುರದಿಂದ ಡಾ. ಎಚ್ ಸಿ. ಮಹಾದೇವಪ್ಪ, ಪಿರಿಯಾಪಟ್ಟಣದಿಂದ ಕೆ. ವೆಂಕಟೇಶ್, ನರಸಿಂಹರಾಜದಿಂದ ತನ್ವೀರ್ ಸೇಠ್, ಚಾಮರಾಜ ಕ್ಷೇತ್ರದಿಂದ ಹರೀಶ್ ಗೌಡ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.