ಮೈಸೂರು:ಪೌರತ್ವ ತಿದ್ದುಪಡಿ ಕಾಯ್ದೆಯಿಂದ ರಾಜ್ಯದಲ್ಲಿ ನಡೆಯುತ್ತಿರುವ ಗಲಾಟೆಗೆ ಕಾಂಗ್ರೆಸ್ ನೇರ ಕಾರಣವೆಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೂರು ವರ್ಷ ಸ್ಥಿರವಾಗಿರುತ್ತದೆ. ಇದನ್ನು ಸಹಿಸಿಕೊಳ್ಳಲಾಗದೇ ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
1947ರಲ್ಲಿ ದೇಶ ಇಬ್ಭಾಗವಾಗುವುದು ಬೇಡ ಎಂದು ಗಾಂಧೀಜಿ ಹೇಳಿದ್ರು. ಆದ್ರೆ ನೆಹರು ಏನು ಮಾಡಿದ್ರು ಎಂದು ದೇಶಕ್ಕೆ ಗೊತ್ತಿದೆ. ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಇಳಿದಿದೆ. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಹಿಂದುಗಳಿಗೆ ತೊಂದರೆಯಾದಾಗ ಅಂದು ಮನಮೋಹನ್ ಸಿಂಗ್ ದೇಶಕ್ಕೆ ಬನ್ನಿ ಅಂದಿದ್ದರು ಎಂದರು.
ಶಾಶ್ವತ ನಾಗರಿಕತ್ವ ಕೊಡಲು ಮೋದಿ ಮುಂದಾದರೆ ಅದು ತಪ್ಪೇ?. ಮಂಗಳೂರಿನಲ್ಲಿ ನಡೆದ ಗಲಾಟೆಯಿಂದ ಇಬ್ಬರು ಅಮಾಯಕರ ಪ್ರಾಣ ಹೋಗಿದೆ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷ ಹೊಣೆ. ಮಾಜಿ ಸಚಿವರಾಗಿ ಯು.ಟಿ.ಖಾದರ್ ಚಿತಾವಣೆಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ನೈತಿಕ ಹೊಣೆಯಿಂದ ಯು.ಟಿ.ಖಾದರ್ ಅವರನ್ನು ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯಿಂದ ಮುಂಜಾಗ್ರತೆಯಿಂದ ಸೆಕ್ಷನ್ 144 ಜಾರಿ ಮಾಡಲಾಗಿದೆ. ಪೊಲೀಸರು ನಿರ್ದಯವಾಗಿ ಕ್ರಮ ತೆಗೆದುಕೊಳ್ಳಿ ಎಂದು ಅಮಿತ್ ಶಾ, ಸಿಎಎ ಬಗ್ಗೆ ಹೇಳಿದ್ದಾರೆ. ಮೋದಿ ಈ ಮಸೂದೆಯಿಂದ ಯಾರಿಗೂ ತೊಂದರೆಯಾಗದು ಎಂದು ಟ್ವೀಟ್ ಮಾಡಿದ್ದಾರೆ ಎಂದರು.