ಮೈಸೂರು:ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಜಿಲ್ಲೆಯ ತಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಗ್ರಾಮದ ಬಳಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವರ ಬರುವಿಕೆಗೆ ಕಾಯುತ್ತ ಈ ಸ್ಥಳದಲ್ಲಿ ಜಮಾಯಿಸಿದ್ದರು.
ಸಚಿವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರು ವಶಕ್ಕೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿರೋಧ ಒಡ್ಡಿದರಲ್ಲದೆ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯದಲ್ಲಿ ಬ್ರಿಟಿಷ್ ಸರ್ಕಾರ ಆಡಳಿತದಲ್ಲಿದೆ. ಶಾಂತಿಯುತ ಪ್ರತಿಭಟನೆ ನಡೆಸುವವರನ್ನು ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ? ಪೊಲೀಸ್ ಇಲಾಖೆ ನೈತಿಕ ಗೂಂಡಾಗಿರಿ ನಡೆಸುತ್ತಿದೆ. ಗೃಹ ಇಲಾಖೆ ಬಿಜೆಪಿಯ ಕೈಗೊಂಬೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ, ಇದಕ್ಕೆಲ್ಲ ತಕ್ಕ ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದರು.
ಕಪ್ಪು ಪಟ್ಟಿ ಪ್ರದರ್ಶನ:ಇನ್ನೊಂದೆಡೆ ಪುರಸಭೆ ಮಾಜಿ ಅಧ್ಯಕ್ಷ ಸೋಮು ಮತ್ತು ಬೆಂಬಲಿಗರು ಕೊಳ್ಳೇಗಾಲ ಮುಖ್ಯರಸ್ತೆ ಸಮೀಪವಿರುವ ಕಾಂಗ್ರೆಸ್ ಕಚೇರಿ ಬಳಿ ಸಚಿವ ಸೋಮಶೇಖರ್ ಕಾರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.