ಮೈಸೂರು :ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಗಣಪತಿ ಸಚ್ಚಿದಾನಂದ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಮೈಸೂರು ಅವಧೂತ ದತ್ತಪೀಠಾಧ್ಯಕ್ಷ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಮಾತನಾಡಿ, ನಾದ ನಿಧಿ, ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ತುಂಬ ದುಃಖವಾಗಿದೆ. ಅನೇಕ ಪ್ರಕಾರದ, ಭಾವಪೂರ್ಣ ಹಾಡುವಿಕೆಯಿಂದ ನಾದ ಸೇವೆ ಮಾಡಿ ಸಹಸ್ರ ಸಹಸ್ರ ಶ್ರೋತೃಗಳ ಹೃದಯದಲ್ಲಿ ಚಿರಂಜೀವಿಯಾಗಿದ್ದಾರೆ ಎಂದಿದ್ದಾರೆ.
ಅವರ ಸರಳತೆ, ಸಂಗೀತವು ಅತಿ ಸಾಮಾನ್ಯನಿಗೂ ರಂಜಿಸಬೇಕೆಂಬ ಪ್ರಯತ್ನ ಶ್ಲಾಘನೀಯ. ಆಶ್ರಮದ ನಾದ ಮಂಟಪದಲ್ಲಿ ಅನೇಕ ಸಾರಿ ಬಾಲು ಅವರ ಸಿರಿಕಂಠದ ಹಾಡುಗಳು ಮೈಸೂರಿನ ಸಂಗೀತ ಶ್ರೋತೃಗಳ, ದತ್ತ ಭಕ್ತರ ಹೃದಯದಲ್ಲಿ ಅವರ ಕಂಠ ಅಜರಾಮರವಾಗಿದೆ ಎಂದು ತಿಳಿಸಿದರು. ಶ್ರೀಗಳ ಭಜನೆಗಳನ್ನು 'ಭಜನ ವೈಭವಮ್' ಎಂಬ ಧ್ವನಿ ಸುರುಳಿಯನ್ನು ಸಮರ್ಪಿಸಿ ಕೃತಾರ್ಥರಾಗಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರಿಗೆ ಸದ್ಗತಿಯನ್ನು ಕರುಣಿಸಿ. ಅವರ ಕುಟುಂಬ ವರ್ಗಕ್ಕೆ, ಅಪಾರ ಅಭಿಮಾನಿಗಳಿಗೆ ಸ್ಥೈರ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇವೆ ಎಂದರು.