ಮೈಸೂರು: ಪಂಚಲಿಂಗ ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ತಲಕಾಡಿನ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ತಲಕಾಡು ಪಂಚಲಿಂಗದರ್ಶನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಸ್ಥರ ಅಭಿಪ್ರಾಯಗಳನ್ನು ಜಿಲ್ಲಾಡಳಿತ ಸ್ವೀಕರಿಸಿದೆ. ಪಂಚಲಿಂಗದರ್ಶನ ಆಚರಣೆಗೆ ನಿಮ್ಮೆಲ್ಲರ ಅಭಿಪ್ರಾಯ ತುಂಬಾ ಮುಖ್ಯವಾಗಿದೆ. ಕೋವಿಡ್ ಇರುವ ಕಾರಣ ಸರ್ಕಾರದ ನಿಯಮ ಪಾಲನೆ ಮಾಡಬೇಕಿದೆ ಎಂದರು.
ತಲಕಾಡು ಪಂಚಲಿಂಗ ದರ್ಶನಕ್ಕೆ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಪಂಚಲಿಂಗ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೆ ಕಡ್ಡಾಯವಾಗಿ ಕೋವಿಡ್ ತಪಾಸಣೆ ನಡೆಸಲಾಗುತ್ತದೆ. ಸಾರ್ವಜನಿಕರ ಸಹಕಾರ ಕೂಡ ಜಿಲ್ಲಾಡಳಿತಕ್ಕೆ ತುಂಬಾ ಮುಖ್ಯವಾಗಿದೆ ಎಂದು ಹೇಳಿದರು.
ಗ್ರಾಮಸ್ಥರ ಮನವಿ: ಪಂಚಲಿಂಗ ದರ್ಶನ ಸಂಬಂಧ ತಲಕಾಡು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದ ಜಿಲ್ಲಾಧಿಕಾರಿಗಳಿಗೆ, ತಲಕಾಡು ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಬಯಲು ಶೌಚಾಲಯ ಇನ್ನೂ ಜೀವಂತವಾಗಿದೆ ಎಂದು ಮನವರಿಕೆ ಮಾಡಿದರು.
ಪಂಚಲಿಂಗದರ್ಶನ ಸಂದರ್ಭದಲ್ಲಿ ಮಾತ್ರ ತಾತ್ಕಾಲಿಕವಾಗಿ ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ. ಬಳಿಕ ತಲಕಾಡು ಗ್ರಾಮ ಯಥಾಸ್ಥಿತಿಲ್ಲಿರುತ್ತದೆ. ತಲಕಾಡು ಗ್ರಾಮ ಐತಿಹಾಸಿಕ ಮತ್ತು ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಜಿಲ್ಲಾಡಳಿತ ತಲಕಾಡಿನ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.