ಮೈಸೂರು:ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪೊಲೀಸ್ ತಂಡಗಳು ಯಶಸ್ವಿಯಾಗಿದ್ದು, 6 ಜನ ಆರೋಪಿಗಳಲ್ಲಿ ಈಗಾಗಲೇ 5 ಜನರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಇನ್ನೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮೈಸೂರಿನಲ್ಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳು ತಮಿಳುನಾಡಿನ ತಿರುಪುರ್ನವರಾಗಿದ್ದು, ಚಾಲಕ, ಕಾರ್ಪೆಂಟರ್ ಹಾಗೂ ಕೂಲಿ ಕಾರ್ಮಿಕರಾಗಿದ್ದಾರೆಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಿ ಬಳಿಕ ಆರೋಪಿಗಳನ್ನು ಮೈಸೂರಿಗೆ ಕರೆತರಲಿದ್ದಾರೆ. ನಂತರ ಇಂದು ರಾತ್ರಿ ಅಥವಾ ನಾಳೆ ಸ್ಥಳ ಮಹಜರು ನಡೆಸಲಿದ್ದಾರೆ ಎನ್ನಲಾಗಿದೆ.
ಹಣ ಬೇಡಿಕೆ ಈಡೇರದಿದ್ದಕ್ಕೆ ಅತ್ಯಾಚಾರ ಎಸಗಿದ ಪಾಪಿಗಳು:
ಆರೋಪಿಗಳೆಲ್ಲರೂ ತಮಿಳುನಾಡಿನ ಕೂಲಿ ಕಾರ್ಮಿಕರಾಗಿದ್ದು, ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಯುವತಿ ಮತ್ತು ಆಕೆಯ ಸ್ನೇಹಿತನಿದ್ದ ಸ್ಥಳದ ಬಳಿಯೇ ಆರೋಪಿಗಳು ಪಾರ್ಟಿ ಮಾಡುತ್ತಿದ್ದರು.
ಓದಿ: ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ Gangrape
ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಇರುವುದನ್ನು ಕಂಡ ಆರೋಪಿಗಳು ಇಬ್ಬರ ವಿಡಿಯೋ ಮಾಡಿದ್ದಾರೆ. ₹3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಹಣ ನೀಡದೇ ಇದ್ದಾಗ ಸ್ನೇಹಿತನ ಮೇಲೆ ಹಲ್ಲೆ ಮಾಡಿ, ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.
ತರಕಾರಿ ತರುತ್ತಿದ್ದ ವಾಹನದಲ್ಲಿ ಆಗಮಿಸಿದ್ದ ಕಿರಾತಕರು:
ಆರೋಪಿಗಳು ಮೈಸೂರಿನ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ತರುತ್ತಿದ್ದ ವಾಹನದಲ್ಲಿ ಆಗಮಿಸಿದ್ದು, ಇದರಲ್ಲಿ ಕೆಲವರು ವೈರಿಂಗ್ ಮಾಡುವವರು, ಕಾರ್ಪೆಂಟರ್ ಹಾಗೂ ಡ್ರೈವರ್ಗಳು ಆಗಿದ್ದಾರೆ. ಕೆಲವರು 7 ಹಾಗೂ 8 ನೇ ತರಗತಿ ಓದಿದ್ದು, ಕೆಲವರು ಅನಕ್ಷರಸ್ಥರಾಗಿದ್ದಾರೆ.
7 ತಂಡ ರಚಿಸಿ ಐವರ ಹೆಡೆಮುರಿಕಟ್ಟಿದ ಖಾಕಿ:
ಘಟನೆ ನಂತರ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ದಾಖಲಿಸಿದ್ದು, ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಂಡು, 7 ತಂಡಗಳು ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿದರು.