ಮೈಸೂರು: ಮೃತಪಟ್ಟಿದ್ದ ತಾಯಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 12 ವರ್ಷಗಳಿಂದ ಸಾಲ ಸೌಲಭ್ಯ ಪಡೆದು ವಂಚಿಸಿದ್ದ ಪುತ್ರ ಸಿಕ್ಕಿಬಿದ್ದಿದ್ದಾನೆ. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಉಯಿನಗೊಂಡನಹಳ್ಳಿಯ ಪಿ.ಡಿ.ಲಿಂಗರಾಜೇಗೌಡ-ಲಕ್ಷ್ಮಮ್ಮ ದಂಪತಿ ಆರೋಪಿಗಳಾಗಿದ್ದು, ಇಬ್ಬರ ವಿರುದ್ಧವೂ ದೂರು ದಾಖಲಾಗಿದೆ.
ತಾಲೂಕಿನ ರತ್ನಗಿರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಾಯಿ ಹೆಸರಲ್ಲಿ ಸಾಲ ಪಡೆದಿರುವ ಜೊತೆಗೆ, ಸರ್ಕಾರಿ ಸಾಲ ಮಂಜೂರಾತಿ, ಬಡ್ಡಿ ಮಂಜೂರಾತಿಯಂತಹ ಸೌಲಭ್ಯವನ್ನೂ ಆರೋಪಿ ಪಡೆದಿದ್ದಾನೆ.
ಆರೋಪಿ ಲಿಂಗರಾಜೇಗೌಡನ ತಾಯಿ ಹಾಗೂ ಪತ್ನಿಯ ಹೆಸರು ಒಂದೇ ಆಗಿತ್ತು. ಈ ಹೆಸರನ್ನು ದುರ್ಬಳಕೆ ಮಾಡಿಕೊಂಡು ಆತ ಸಾಲ ಪಡೆದಿದ್ದ. ಉಯಿಗೊಂಡನಹಳ್ಳಿಯ ದೇಶೇಗೌಡ-ಲಕ್ಷ್ಮಮ್ಮ ದಂಪತಿಗೆ 5 ಗಂಡು, 3 ಹೆಣ್ಣು ಮಕ್ಕಳಿದ್ದು, ತಾಯಿ ಲಕ್ಷ್ಮಮ್ಮ 1986ರಲ್ಲಿ ಮೃತಪಟ್ಟಿದ್ದರು. ತಾಯಿ ಲಕ್ಷ್ಮಮ್ಮ ತಮ್ಮ ಹೆಸರಿನಲ್ಲಿ ಉಯಿಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್ 38/117ರಲ್ಲಿ 1.05 ಎಕರೆ ಭೂಮಿ ಹೊಂದಿದ್ದರು. ಪಿ.ಡಿ.ಲಿಂಗರಾಜೇಗೌಡರ ಪತ್ನಿಯ ಹೆಸರೂ ಲಕ್ಷ್ಮಮ್ಮ ಆಗಿದ್ದು, 2006ರಲ್ಲಿ ರತ್ನಪುರಿಯ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಪತ್ನಿ ಲಕ್ಷ್ಮಮ್ಮರನ್ನು ತೋರಿಸಿ ಇವರೇ ತಾಯಿ ಲಕ್ಷ್ಮಮ್ಮ ಎಂದು ಸದಸ್ಯತ್ವ ಪಡೆದಿದ್ದ.
ಪತ್ನಿಯಿಂದ ಹೆಬ್ಬೆಟ್ಟು ಹಾಕಿಸಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ಕುಟುಂಬಕ್ಕೆ ಸೇರಿದ್ದ ಜಮೀನನ್ನು ಅಡಮಾನವಿಟ್ಟು ಸತತ 12 ವರ್ಷಗಳ ಕಾಲ ಸಾಲ ಸೌಲಭ್ಯ ಹಾಗೂ 2007ರಲ್ಲಿ 10 ಸಾವಿರ, 2013ರಲ್ಲಿ 21 ಸಾವಿರ ಮತ್ತು 2018ರಲ್ಲಿ 49 ಸಾವಿರ ರೂ.ಸಾಲ ಮನ್ನಾದ ಸೌಲಭ್ಯವನ್ನು ಪಡೆದುಕೊಂಡಿದ್ದು ಗೊತ್ತಾಗಿದೆ. ಅಣ್ಣನಿಗೆ ಸಾಲಸೌಲಭ್ಯ ಸಿಗುತ್ತಿರುವುದನ್ನು ಕಂಡು ಅನುಮಾನಗೊಂಡ ಸಹೋದರ ಮೊಗಣ್ಣೇಗೌಡ ಸಹಕಾರ ಸಂಘದಲ್ಲಿ ವಿಚಾರಿಸಿದಾಗ ವಂಚನೆಯ ಬಗ್ಗೆ ತಿಳಿದುಬಂದಿತ್ತು.