ಮೈಸೂರು: ಮಹಿಳಾ ಸಬ್ ಇನ್ಸ್ಪೆಕ್ಟರ್ವೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದ ಹಿನ್ನಲೆ ಎಸ್‌ಐ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಸ್ಐ ನಡುವೆ ಪ್ರೇಮಾಂಕುರ.. ಕೈ ಕೊಟ್ಟ ಪ್ರಿಯಕರನ ವಿರುದ್ಧ ಲೇಡಿ ಪೊಲೀಸ್ ದೂರು - ಕೈ ಕೊಟ್ಟ ಪ್ರಿಯಕರನ ವಿರುದ್ಧ ಲೇಡಿ ಪೊಲೀಸ್ ದೂರು
13:30 December 10
ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಆರೋಪಿಸಿ ಮಹಿಳಾ ಸಬ್ ಇನ್ಸ್ಪೆಕ್ಟರ್ವೊಬ್ಬರು ಎಸ್ಐ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಗರದ ನರಸಿಂಹರಾಜ ಠಾಣೆಯಲ್ಲಿ ಎಸ್‌ಐ ಆಗಿ ಕೆಲಸ ಮಾಡುತ್ತಿದ್ದ ಆನಂದ್ ವಿರುದ್ಧ ವಿವಿಪುರಂ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಘಟನೆ ವಿವರ :ಕಳೆದ ಕೆಲ ವರ್ಷಗಳಿಂದ ಎಸ್ಐ ಮತ್ತು ಸಬ್ ಇನ್ಸ್ಪೆಕ್ಟರ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ಸಲುಗೆಯ ಹಂತಕ್ಕೆ ತಲುಪಿ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಇಲಾಖೆಯಲ್ಲಿ ಹರಡಿತ್ತು. ಆದರೆ, ದಿನ ಕಳೆದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಎಸ್‌ಐ ಆನಂದ್ ಬೇರೆ ಹುಡುಗಿ ಜೊತೆ ವಿವಾಹವಾಗಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ನಂತರ ಮದುವೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಸಬ್ ಇನ್ಸ್ಪೆಕ್ಟರ್, ವಿವಾಹ ನಿಲ್ಲಿಸುವ ಜೊತೆಗೆ ಗುಪ್ತವಾಗಿ ಮತ್ತೊಂದು ಮದುವೆಯಾಗಿದ್ದಾನೆ ಎಂದು ಆರೋಪಿಸಿ ಎಸ್‌ಐ ವಿರುದ್ಧ ವಿಜಯನಗರ ಠಾಣೆಗೆ ದೂರು ದಾಖಲಿಸಿದ್ದಾರೆ.
ಅತ್ಯಾಚಾರ ಆರೋಪ :ಎಸ್‌ಐ ಆನಂದ್ ಎಂಬುವರು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಗರ್ಭಪಾತ ಮಾಡಿಸಿದ್ದಾನೆ. ಜೊತೆಗೆ ನನ್ನನ್ನೇ ಮದುವೆಯಾಗುತ್ತೇನೆ ಎಂದು ನಂಬಿಸಿ ಬೇರೆ ಹುಡುಗಿ ಜೊತೆ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಮಹಿಳಾ ಸಬ್ ಇನ್ಸ್ಪೆಕ್ಟರ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.