ಮೈಸೂರು :ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಕಾಂಗ್ರೆಸ್ ನಿಯೋಗವು, ದೂರು ದಾಖಲಿಸಿದೆ. ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಡಾ. ಬಿ ಜೆ ವಿಜಯಕುಮಾರ್ ನೇತೃತ್ವದ ನಿಯೋಗವು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಡಿಸಿಪಿ ಎಂ. ಮುತ್ತುರಾಜು ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಮುಖಂಡರು ಅವರೊಂದಿಗೆ ಚರ್ಚಿಸಿ ದೂರು ನೀಡಿದೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಸಂಸದ ಅನಂತಕುಮಾರ್ ಹೆಗಡೆ ಮಾತನಾಡುವಾಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಹೀಗೆ ಮಾತನಾಡಿದ್ದಾರೆ. ಈ ಹಿಂದೆ ಬಿಜೆಪಿ ಬಂದಿರುವುದೇ ದೇಶದಲ್ಲಿ ಸಂವಿಧಾನ ಬದಲಾವಣೆಯನ್ನು ಮಾಡುವುದಕ್ಕಾಗಿ ಎಂದು ಹೇಳಿದ್ದರು. ಆದ್ದರಿಂದ ಕೂಡಲೇ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ಚುನಾವಣೆ ಮುಗಿಯುವವರೆಗೆ ಬಂಧಿಸಬೇಕು ಎಂದು ಕಾಂಗ್ರೆಸ್ ನಿಯೋಗ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.