ಮೈಸೂರು: ಬೇಟೆಗಾರರ ಉರುಳಿಗೆ ಸಿಲುಕಿ ಸಾವನ್ನಪಿದ್ದ ಹೆಣ್ಣು ಹುಲಿಯ ಮೂರು ಮರಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸಾಕಾನೆ ನೆರವಿನ ಮೂಲಕ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯಕ್ಕೆ ಸೇರಿದ ತಾರಕ ಗ್ರಾಮದ ಜಮೀನೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 12-13 ವರ್ಷದ ಹೆಣ್ಣು ಹುಲಿ ಕಳೇಬರ ಪತ್ತೆಯಾಗಿದೆ. ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವಿಗೀಡಾಗಿದೆ. ಈ ಹುಲಿಗೆ ಸುಮಾರು 6 ರಿಂದ 8 ತಿಂಗಳ ಮೂರು ಮರಿಗಳಿದ್ದವು. ತಾಯಿ ಉರುಳಿಗೆ ಸಿಲುಕಿದ ಸಂದರ್ಭದಲ್ಲಿ ಈ ಮರಿಗಳು ಅಲ್ಲಿಂದ ಬೇರೆ ಕಡೆ ಹೋಗಿವೆ.
ಹುಲಿ ಮರಿ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ಈ ಹೆಣ್ಣು ಹುಲಿ ಕಾಕನಕೋಟೆಯ ಸಫಾರಿಯ ಪ್ರಮುಖ ಆಕರ್ಷಣೆಯಾಗಿತ್ತು. ಇದಕ್ಕೆ ಪ್ರವಾಸಿಗರು ಹಾಗೂ ವನ್ಯಜೀವಿ ಛಾಯಾಗ್ರಾಹಕರು ನಾಯಂಗಚ್ಚಿಕಟ್ಟೆ ಫಿಮೇಲ್ ಎಂದು ಹೆಸರಿಟ್ಟಿದ್ದರು. ಸಫಾರಿಯ ವೇಳೆ ನಾಯಂಗಚ್ಚಿಕಟ್ಟೆಯ ಕೆರೆಯ ಬಳಿ ತನ್ನ ಮರಿಗಳೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. 4 ಬಾರಿ ಮರಿಗಳಿಗೆ ಜನ್ಮ ನೀಡಿದ್ದ ಈ ಹುಲಿ ಇಲ್ಲಿಯವರೆಗೆ ಒಟ್ಟು 12 ಮರಿಗಳನ್ನು ಹಾಕಿದೆ ಎಂದು ತಿಳಿದು ಬಂದಿದೆ.
ಆಹಾರ ಅರಸಿ ತಾರಕ ಹಿನ್ನೀರಿನ ಪ್ರದೇಶಕ್ಕೆ ತನ್ನ ಮರಿಗಳ ಜತೆ ಬಂದಾಗ ಕಳ್ಳ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಕಳ್ಳ ಬೇಟೆಗಾರರು ಕಾಡು ಹಂದಿಗೆ ಉರುಳು ಹಾಕಿದ್ದಾರಾ ಅಥವಾ ಹುಲಿಯ ಬೇಟೆಗಾಗಿಯೇ ಹಾಕಿದ್ದಾರಾ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಹುಲಿ ಮರಿ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ಸಾಕಾನೆ ನೆರವಿನಿಂದ ಕೂಂಬಿಂಗ್ ಕಾರ್ಯಾಚರಣೆ: ತಾಯಿಯನ್ನು ಕಳೆದುಕೊಂಡ 3 ಮರಿಗಳ ವಯಸ್ಸು ಸುಮಾರು 6 ರಿಂದ 8 ತಿಂಗಳು ಇರಬಹುದು. ಅದ್ದರಿಂದ ಇವು ಕಾಡಿನಲ್ಲಿ ಸ್ವತಃ ಭೇಟೆಯಾಡಿ ಬದುಕಲು ಕಷ್ಟ. ಆಹಾರ ಸಿಗದೆ ಸಾಯುವ ಸಾಧ್ಯತೆಯಿರುವುದರಿಂದ ಸಾಕಾನೆಗಳಾದ ಅಭಿಮನ್ಯು, ಅಶ್ವತ್ಥಾಮ ಹಾಗೂ ಭೀಮ ಆನೆಗಳ ಮೂಲಕ ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಹುಲಿ ಮರಿಗಳ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಅವುಗಳಿಗೆ ಅರವಳಿಕೆ ಮದ್ದು ನೀಡಿ, ಸೆರೆ ಹಿಡಿದು ಸಾಕುವ ಯೋಜನೆ ಅರಣ್ಯ ಇಲಾಖೆಯದ್ದು.
ಈ ಮಧ್ಯೆ ಉರುಳು ಹಾಕಿರುವ ಕಳ್ಳ ಬೇಟೆಗಾರರ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ ಎಂದು ವಲಯ ಅರಣ್ಯಾಧಿಕಾರಿ ಸಿದ್ದರಾಜು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು.
ಇದನ್ನೂ ಓದಿ:ಮೈಸೂರು: ಕಾಡುಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಹೆಣ್ಣು ಹುಲಿ ಸಾವು