ಮೈಸೂರು :ಹೆಚ್ ಡಿ ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ. ಇತಿಹಾಸದಲ್ಲಿ ಅವರು ಸತ್ಯ ಹೇಳಿರುವ ಒಂದು ನಿದರ್ಶನ ತೋರಿಸಿ. ಅವರ ಸುಳ್ಳುಗಳನ್ನ ತನಿಖೆ ಮಾಡಲು ಆಗುತ್ತದೆಯೇ. ಮಾಡಿರುವ ಆರೋಪಗಳ ಬಗ್ಗೆ ದಾಖಲೆ, ಪುರಾವೆ ಕೊಟ್ಟರೆ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನ ಮಂಡಕನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಹೊಟ್ಟೆ ಕಿಚ್ಚು, ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮಗೆ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ಮಾಡುವುದು ಇಲ್ಲ. ಕುಮಾರಸ್ವಾಮಿ ಹೇಳುವುದೆಲ್ಲ ಬರೀ ಸುಳ್ಳು. ಸುಳ್ಳೇ ಅವರ ಮನೆಯ ದೇವರು. ಸುಳ್ಳುಗಳನ್ನ ತನಿಖೆ ಮಾಡಲು ಸಾಧ್ಯವೇ. ಕುಮಾರಸ್ವಾಮಿ ಇಲ್ಲಿಯವರೆಗೆ ಯಾವುದನ್ನಾದರೂ ಸತ್ಯ ಹೇಳಿದ್ದರೆ ತೋರಿಸಿ. ಹೆಚ್ಡಿಕೆ ಬರೀ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಕಿಡಿಕಾರಿದರು.
ನನ್ನ ಮಗ ಯತೀಂದ್ರ ಸಿದ್ದರಾಮಯ್ಯ ವಿಚಾರದಲ್ಲಿ ಬರೀ ಸುಮ್ಮನೆ ಸುಳ್ಳನ್ನು ಹಬ್ಬಿಸಿದರು. ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ. ಆತ ಮಾಜಿ ಶಾಸಕ, ಆಶ್ರಯ ಸಮಿತಿ ಅಧ್ಯಕ್ಷ ಕೂಡ. ಈಗ ನನ್ನ ಪರವಾಗಿ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಜನರ ಕೆಲಸ ಮಾಡುವುದು ತಪ್ಪಾ?. ಕೆಐಡಿಬಿ ಸದಸ್ಯನಾಗಿರುವ ಕಾರಣ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾನೆ. ಅದರ ವಿಚಾರದಲ್ಲಿ ಬೇರೆ ಬೇರೆ ಅರ್ಥ ಕಲ್ಪಿಸಿದರೆ ಹೇಗೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಗತ್ಯ ಬಿದ್ದರೆ ಹಳೆಯ ಹಗರಣಗಳ ಬಗ್ಗೆ ತನಿಖೆ ನಡೆಸಲಾಗುವುದು. ಈಗಾಗಲೇ ಬಿಟ್ ಕಾಯಿನ್ ಹಗರಣ, ಕೋವಿಡ್ ಹಗರಣ, 40 % ಕಮಿಷನ್ ಹಗರಣ ಸೇರಿದಂತೆ ಈಗಾಗಲೇ ಹಲವು ಪ್ರಕರಣಗಳನ್ನು ತನಿಖೆಗೆ ವಹಿಸಲಾಗಿದ್ದು, ತನಿಖಾ ವರದಿ ಇನ್ನೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.