ಕರ್ನಾಟಕ

karnataka

ಬಸವಾದಿ ಶರಣರ ಸಮ ಸಮಾಜ ನಿರ್ಮಾಣ ನನ್ನ ಆಶಯ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Oct 7, 2023, 6:02 PM IST

"ಒಬ್ಬರ ತಲೆ ಮೇಲೆ ಒಬ್ಬರು ಕೂರುವ ವ್ಯವಸ್ಥೆ ಅಳಿಸಿ, ಒಬ್ಬರ ಪಕ್ಕ ಒಬ್ಬರು ಕೂರುವ ಸಮಾಜ ನಿರ್ಮಾಣ ಬಸವಾದಿ ಶರಣರ ಆಶಯವಾಗಿತ್ತು. ಇದು ನನ್ನ ಆಶಯವೂ ಹೌದು" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

CM Siddaramaiah talks in Basava Jayanthi program at mysore
ಬಸವಾದಿ ಶರಣರ ಸಮ ಸಮಾಜ ನಿರ್ಮಾಣ ನನ್ನ ಆಶಯ: ಸಿಎಂ ಸಿದ್ದರಾಮಯ್ಯ

ಮೈಸೂರು:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ- ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಮೈಸೂರಿನ ಬಸವ ಬಳಗಗಳ ಒಕ್ಕೂಟ ಮೈಸೂರು ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, "ಒಬ್ಬರ ತಲೆ ಮೇಲೆ ಒಬ್ಬರು ಕೂರುವ ವ್ಯವಸ್ಥೆ ಅಳಿಸಿ, ಒಬ್ಬರ ಪಕ್ಕ ಒಬ್ಬರು ಕೂರುವ ಸಮಾಜ ನಿರ್ಮಾಣ ಬಸವಾದಿ ಶರಣರ ಆಶಯವಾಗಿತ್ತು. ಇದು ನನ್ನ ಆಶಯವೂ ಹೌದು" ಎಂದರು.

"ಬಸವಾದಿ ಶರಣರು ಮೇಲ್ವರ್ಗದವರ ಪರವಾಗಿ ಕೆಲಸ ಮಾಡಲಿಲ್ಲ. ಶೂದ್ರ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದರು. ತಳ ಸಮುದಾಯದ ಅಲ್ಲಮಪ್ರಭು ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲೇ ಜಾರಿಗೆ ತಂದವರು ಬಸವಾದಿ ಶರಣರು. ಆ ಕಾಲದಲ್ಲೇ ಅಂತರ್ಜಾತಿ ವಿವಾಹ ಮಾಡಿಸಿದವರು ಬಸವಣ್ಣ. ಈ ಕಾರಣಕ್ಕಾಗಿ ಬಸವಣ್ಣನವರ ವಿರುದ್ಧ ಬಿಜ್ಜಳನನ್ನು ಎತ್ತಿಕಟ್ಟಿದರು" ಎಂದು ವಿವರಿಸಿದರು.

ಮೈಸೂರು ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ

"12ನೇ ಶತಮಾನದ ಶರಣರ ಆಶಯಗಳು ಇನ್ನೂ ಈಡೇರಿಲ್ಲ. ಸ್ವಾತಂತ್ರ್ಯ ಬಂದು 76 ವರ್ಷಗಳ ನಂತರವೂ ಪ್ರಜಾಪ್ರಭುತ್ವದ, ಸಂವಿಧಾನದ ಆಶಯಗಳು ಈಡೇರಿಲ್ಲ. ಅಸಮಾನತೆ ಹೋಗಿಲ್ಲ. ಈ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಜಾರಿ ಸಂದರ್ಭದಲ್ಲೇ ಎಚ್ಚರಿಸಿದ್ದರು. ಅಂಬೇಡ್ಕರ್ ಅವರು ಕೊಟ್ಟ ಎಚ್ಚರಿಕೆಯನ್ನೇ 12ನೇ ಶತಮಾನದಲ್ಲೇ ಬಸವಣ್ಣ ಮತ್ತು ಬಸವಾದಿ ಶರಣರು ಕೊಟ್ಟಿದ್ದರು" ಎಂದು ಹೇಳಿದರು.

"ಜನರ ಭಾಷೆಯಲ್ಲೇ ಸಾಹಿತ್ಯ ರಚಿಸಿದ್ದು ಬಸವಾದಿ ಶರಣರು ಮಾಡಿದ ಬಹಳ ದೊಡ್ಡ ಕ್ರಾಂತಿ. ಸಂಸ್ಕೃತದಲ್ಲಿ ಸಾಹಿತ್ಯ ರಚಿಸಿದರೆ ಜನರಿಗೆ ಅರ್ಥ ಆಗುತ್ತದೆಯೇ? ಯಾರಿಗೂ ಅರ್ಥ ಆಗುವುದಿಲ್ಲ ಎನ್ನುವ ಕಾರಣಕ್ಕೆ ಜನರ ಭಾಷೆಯಲ್ಲಿ ಅತ್ಯುನ್ನತ ಕನ್ನಡದಲ್ಲಿ ಶರಣ ಸಾಹಿತ್ಯ ರಚನೆಯಾಯಿತು. ಬಸವಾದಿ ಶರಣರು 12ನೇ ಶತಮಾನದಲ್ಲೇ ಜಡ್ಡುಗಟ್ಟಿದ ಜಾತಿ ಸಮಾಜಕ್ಕೆ ಚಾಲನೆ ನೀಡಿದರು. ಜಾತಿ ರಹಿತ ಸಮಾಜ, ಮೌಢ್ಯಗಳನ್ನು ಕಿತ್ತೆಸೆದು ಕಂದಾಚಾರಗಳಿಲ್ಲದ ಸಮಾಜ ನಿರ್ಮಾಣಕ್ಕೆ ಮುಂದಾದರು" ಎಂದು ನುಡಿದರು.

ಮೈಸೂರು ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ

"ಸಮಾಜ ಜಾತಿ ಆಧಾರದಲ್ಲಿ ವಿಭಜನೆ ಆಗಬಾರದು. ಕುವೆಂಪು ಅವರು, ಹುಟ್ಟುತ್ತಾ ಎಲ್ಲರೂ ವಿಶ್ವ ಮಾನವರು. ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎಂದಿದ್ದರು. ನಾವು ಹಾಗಾಗಬಾರದು. ಶ್ರೇಣೀಕೃತ ಸಮಾಜ ಹೋಗಬೇಕು. ಸಮಾನಾಂತರ ಸಮಾಜ ಬರಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು" ಎಂದರು.

ವೀರಶೈವ-ಲಿಂಗಾಯತ ಸಮುದಾಯ ಈ ಕಾರ್ಯಕ್ರಮದಲ್ಲಿ ಮುಂದಿಟ್ಟಿರುವ ಬೇಡಿಕೆಗಳನ್ನು ಮುಂದಿನ ಬಜೆಟ್​ನಲ್ಲಿ ಗಣನೀಯವಾಗಿ ಪರಿಗಣಿಸಲಾಗುವುದು ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.

ಮೈಸೂರು ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ

ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾತನಾಡಿ, "ಸಿದ್ದರಾಮಯ್ಯ ಬಸವತತ್ವದ ಅಪ್ಪಟ ಅನುಯಾಯಿ. ಸರ್ವರನ್ನೂ ಜತೆಯಾಗಿ ಕೊಂಡೊಯ್ಯುತ್ತಿದ್ದಾರೆ. ಎಲ್ಲಾ ಜಾತಿ-ಧರ್ಮ- ಸಮುದಾಯಗಳಿಗೆ ಅಕ್ಷರ ಮತ್ತು ಅನ್ನ ದಾಸೋಹವನ್ನು ನೀಡಿದ್ದು ಲಿಂಗಾಯತ ವೀರಶೈವ ಮಠಗಳು. ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಕಾರ್ಯಕ್ರಮಗಳು ಕೂಡ ಶರಣರ ಆಶಯದಂತೆ ಎಲ್ಲಾ ಜಾತಿ, ಧರ್ಮಗಳಿಗೂ ಅನ್ವಯವಾಗುತ್ತವೆ" ಎಂದು ವಿವರಿಸಿದರು.

ಮೈಸೂರು ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ

ನಂತರದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶರಣ ಸಂಸ್ಕೃತಿಯನ್ನು ತಮ್ಮ ಬದುಕಿನ ಆಚರಣೆಯನ್ನಾಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಬಸವ ಜಯಂತಿಯ ದಿನವನ್ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಯ್ಕೆ ಮಾಡಿಕೊಂಡರು" ಎಂದು ನುಡಿದರು.

"ಶರಣ ಸಂಸ್ಕೃತಿಯ ಅನುಯಾಯಿಗಳಾದ ಸಿದ್ದರಾಮಯ್ಯರವರು, ಮುಖ್ಯಮಂತ್ರಿಯಾದ ಬಳಿಕ ಮೊದಲಿಗೆ ಸಹಿ ಹಾಕಿದ್ದು ದಾಸೋಹ ಸಂಸ್ಕೃತಿಯ ಅನ್ನ ಭಾಗ್ಯ ಯೋಜನೆಗೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋವನ್ನು ಕಡ್ಡಾಯಗೊಳಿಸಿದ್ದು ಸಿದ್ದರಾಮಯ್ಯರವರೇ. ಹೀಗಾಗಿ ವಚನ ಕ್ರಾಂತಿ ಮತ್ತು ಶರಣ ಸಂಸ್ಕೃತಿಯ ಆಶಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದುಕು ಮತ್ತು ಆಚರಣೆಗಳಲ್ಲಿ ಇದೆ" ಎಂದು ಹೇಳಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ವಹಿಸಿದ್ದರು. ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಅವರು '12ನೇ ಶತಮಾನದ ಶರಣ ದಂಪತಿಗಳು' ಕೃತಿಯನ್ನು ಬಿಡುಗಡೆ ಮಾಡಿದರು.

ಬಸವೇಶ್ವರ ಪುತ್ಥಳಿ ದಾನ ಮಾಡಿದ ನೈಸ್ ಸಂಸ್ಥೆಯ ಮುಖ್ಯಸ್ಥರಾದ ಅಶೋಕ್ ಖೇಣಿ, ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್ ದೃವನಾರಾಯಣ್, ಜಿ.ಡಿ. ಹರೀಶ್ ಗೌಡ, ಹೆಚ್.ಎಂ. ಗಣೇಶ್ ಪ್ರಸಾದ್, ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಿ. ತಿಮ್ಮಯ್ಯ ಸೇರಿ ಮಾಜಿ ಶಾಸಕರು ಹಾಗೂ ನಾಯಕರುಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details