ಕರ್ನಾಟಕ

karnataka

ETV Bharat / state

ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅದರ ಧ್ಯೇಯೋದ್ದೇಶಗಳ ಜಾರಿಗೆ ಪ್ರಯತ್ನಿಸಬೇಕು: ಸಿಎಂ ಸಿದ್ದರಾಮಯ್ಯ - indian constitution

ವಿದ್ಯೆ ಕಲಿತು ಜಾತ್ಯತೀತವಾಗಿ ಯೋಚಿಸುವುದನ್ನು ಬಿಟ್ಟು, ಜಾತಿವಾದಿಗಳಾದರೆ ಏನು ಪ್ರಯೋಜನವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

cm-siddaramaiah-reaction-on-indian-constitution-in-mysuru
ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅದರ ಧ್ಯೇಯೋದ್ದೇಶಗಳ ಜಾರಿಗೆ ಪ್ರತ್ನಿಸಬೇಕು: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Sep 11, 2023, 7:49 PM IST

ಮೈಸೂರು: ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಸಂವಿಧಾನದ ಪೀಠಿಕೆಯನ್ನು ಓದಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿಕೊಳ್ಳಬೇಕು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಹಾಗೂ ಬಿಜಿಎಸ್ ಸಾಂಸ್ಕೃತಿಕ ಭವನ ಉದ್ಘಾಟನೆ ಮತ್ತು ಉಚಿತ ವಿದ್ಯಾರ್ಥಿನಿಲಯದ ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜಿಎಸ್ ಸಾಂಸ್ಕೃತಿಕ ಭವನ ಮತ್ತು ಉಚಿತ ವಿದ್ಯಾರ್ಥಿನಿಲಯದ ಲೋಕಾರ್ಪಣೆ ಮಾಡಿದ ಸಿಎಂ

ನೂತನ ವಿದ್ಯಾರ್ಥಿನಿಲಯದಲ್ಲಿ 200 ಜನ ವಿದ್ಯಾರ್ಥಿಗಳಿಗೆ ಇಲ್ಲಿ ಓದಲು ಅವಕಾಶ ಕಲ್ಪಿಸಲಾಗಿದ್ದು, ಇನ್ನಷ್ಟು ಭಾಗದಲ್ಲಿ ವಿದ್ಯಾರ್ಥಿನಿಲಯಗಳಿವೆ. ವಿದ್ಯೆ ನೀಡುವುದು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ದೊರೆತರೆ ಮಾತ್ರ ಜ್ಞಾನ ಬೆಳೆಯಲು, ಎಲ್ಲರೂ ಸ್ವಾಭಿಮಾನದಿಂದ ಬದುಕಲು ಸಾಧ್ಯ. ವಿದ್ಯೆ ಕಲಿಯದೇ ಹೋದರೆ ಯೋಚನಾಪರವಾಗಲು, ಸ್ವಾಭಿಮಾನಿಗಳಾಗಲು, ಜ್ಞಾನಿಗಳಾಗಲು ಸಾಧ್ಯವಿಲ್ಲ. ಆದರೆ, ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯ. ವೈಜ್ಞಾನಿಕ, ವೈಚಾರಿಕತೆಯನ್ನು ಬೆಳೆಸುವ ಶಿಕ್ಷಣ ಅಗತ್ಯ ಎಂದರು.

ವಿದ್ಯೆ ಕಲಿತು ಜಾತ್ಯಾತೀತವಾಗಿ ಯೋಚಿಸುವುದನ್ನು ಬಿಟ್ಟು, ಜಾತಿವಾದಿಗಳಾದರೆ ಏನು ಪ್ರಯೋಜನವಿಲ್ಲ. ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳನ್ನು ಹೊಂದಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ನಾವೆಲ್ಲರೂ ಆಕಸ್ಮಿಕವಾಗಿ ಯಾವುದೋ ಜಾತಿ, ಧರ್ಮಗಳಲ್ಲಿ ಹುಟ್ಟಿರುತ್ತೇವೆ. ಹಾಗೆಂದು ನಾವು ಮನುಷ್ಯತ್ವವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಧರ್ಮ ಅಂದರೆ ಬದುಕಿನ ಮಾರ್ಗ:ಕೆಲವರು ಮನುಷ್ಯ, ಮನುಷ್ಯರಲ್ಲಿ ಬೆಂಕಿ ಇಡುವ ಕೆಲಸ ಮಾಡುತ್ತಾರೆ. ಅದಕ್ಕೆ ಬಲಿಯಾಗದೆ, ಮನುಷ್ಯ, ಮನುಷ್ಯನನ್ನು ಪ್ರೀತಿಸಬೇಕು. ಧರ್ಮ ಅಂದರೆ ಬದುಕಿನ ಮಾರ್ಗ. ಬಸವಾದಿ ಶರಣರು ದಯವೇ ಧರ್ಮದ ಮೂಲವಯ್ಯಾ ಎಂದಿದ್ದಾರೆ. ದಯೆ ಇಲ್ಲದ ಧರ್ಮ ಅದ್ಯಾವುದಯ್ಯ ಎಂದಿದ್ದಾರೆ. ಮನುಷ್ಯ, ಧರ್ಮವಿರುವುದು ಮನುಷ್ಯನ ಒಳಿತಿಗಾಗಿ, ಅವನ ಉತ್ತಮ ಬದುಕಿಗಾಗಿ. ಧರ್ಮಕ್ಕಾಗಿ ಮನುಷ್ಯ ಇಲ್ಲ. ಈ ಬಗ್ಗೆ ನಾವು ಸ್ಪಷ್ಟತೆ ಹೊಂದಬೇಕು. ಮನುಷ್ಯ ಮನುಷ್ಯನನ್ನು ದಯೆ, ಕರುಣೆಯಿಂದ ಕಾಣುವುದೇ ಧರ್ಮ. ಯಾವ ಧರ್ಮದಲ್ಲಿ ದಯೆ, ಪ್ರೀತಿ, ಕರುಣೆ ಇಲ್ಲವೋ, ಅದು ಧರ್ಮವಲ್ಲ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಮರಣಿಕೆ ನೀಡಿದ ನಿರ್ಮಲಾನಂದನಾಥ ಸ್ವಾಮಿ

ಕೆಂಪೇಗೌಡರ ಜಯಂತಿಯನ್ನು ಆಚರಿಸಲು ತೀರ್ಮಾನಿಸಿದ್ದು ನಮ್ಮ ಸರ್ಕಾರ:ಕೆಲವೇ ಧಾರ್ಮಿಕ ಕ್ಷೇತ್ರಗಳಲ್ಲಿ ಆದಿಚುಂಚನಗಿರಿ ಕ್ಷೇತ್ರ ಕೂಡ ಬಹಳ ಪ್ರಸಿದ್ಧವಾದ ಕ್ಷೇತ್ರ. ಆ ಜವಾಬ್ದಾರಿಯನ್ನು ಹೊತ್ತು ಧಾರ್ಮಿಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ನಿರ್ಮಲಾನಂದನಾಥ ಸ್ವಾಮಿಗಳು ಸಾಧನೆ ಮಾಡಿದ್ದಾರೆ. ನಮ್ಮ ಸರ್ಕಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನ ಮಾಡಿದ್ದು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಕೆಂಪೇಗೌಡ ಪ್ರಾಧಿಕಾರವನ್ನು ಕೂಡ ನಮ್ಮ ಸರ್ಕಾರವೇ ಸ್ಥಾಪಿಸಿತು. ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದು ಕೂಡ ನಮ್ಮ ಸರ್ಕಾರವೇ. ಕೆಂಪೇಗೌಡರ ಹೆಸರು ಚಿರಸ್ಥಾಯಿ ಎಂಬ ಕಾರಣದಿಂದ ಕೆಂಪೇಗೌಡ ಜಯಂತಿ ಆಚರಿಸಲು ತೀರ್ಮಾನ ಮಾಡಿದ್ದೆವು ಎಂದರು.

ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಶ್ರೀಮಠದಿಂದ ಮಾನವೀಯ ಸಮಾಜ ನಿರ್ಮಾಣ:ಆದಿಚುಂಚನಗಿರಿ 1800 ವರ್ಷಗಳ ಇತಿಹಾಸ ಇರುವ ಪ್ರಾಚೀನವಾದ ಕ್ಷೇತ್ರವಾಗಿದ್ದು, ಈಶ್ವರನ ತಪೋಭೂಮಿ. ಅನೇಕ ಸಾಧು ಸಂತರನ್ನು ಕಂಡಿರುವ ಆದಿಚುಂಚನಗಿರಿ ಕ್ಷೇತ್ರ ಹೆಮ್ಮರವಾಗಿ ಬೆಳವಣಿಗೆಯಾಗುವಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪಾತ್ರ ಬಹಳ ದೊಡ್ಡದು. ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಮಠ ವಿಶಾಲವಾಗಿ ಬೆಳೆದಿದೆ. ನಾಥ ಪಂಥ ಜಾತಿರಹಿತವಾದದ್ದು. ನಾವೆಲ್ಲ ಮೂಲತಃ ಮನುಷ್ಯರು, ನಂತರ ವಿವಿಧ ಜಾತಿಗಳನ್ನು ಸೃಷ್ಟಿಸಿ ಸಮಾಜವನ್ನು ವಿಂಗಡಿಸಲಾಗಿದೆ. ಸಾಮಾಜಿಕ , ಆರ್ಥಿಕ ಅಸಮಾನತೆಯಿದ್ದು, ಮೇಲ್ವರ್ಗ ಮತ್ತು ಕೆಳವರ್ಗ ಎಂಬ ಭೇದ ಭಾವವಿದೆ. ಈ ಅಸಮಾನತೆಗಳನ್ನು ಹೋಗಲಾಡಿಸಿ, ಮಾನವೀಯ ಸಮಾಜವನ್ನು ನಿರ್ಮಿಸಲು ನಾಥಪಂಥ ಪ್ರಯತ್ನಿಸಿದಂತೆ ಆದಿಚುಂಚನಗಿರಿ ಮಠವೂ ಶ್ರಮಿಸಿದೆ ಎಂದು ಹೇಳಿದರು.

ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಇದನ್ನೂ ಓದಿ:ಸಿಎಂ ವಿರುದ್ಧ ಹೇಳಿಕೆ ನೀಡುವುದು ಬಿ ಕೆ ಹರಿಪ್ರಸಾದ್​ಗೇ ಡ್ಯಾಮೇಜ್: ದಿನೇಶ್ ಗುಂಡೂರಾವ್

ABOUT THE AUTHOR

...view details