ಕರ್ನಾಟಕ

karnataka

ETV Bharat / state

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಉದ್ಯಮಿಗಳಿಗೆ ಸಿಎಂ ಸಿದ್ದರಾಮಯ್ಯ ಮನವಿ - ಕಾರ್ಮಿಕ ಸಂಘ

ಕೈಗಾರಿಕೆಗಳಿಗಾಗಿ ಭೂಮಿ ಕಳೆದುಕೊಂಡಿರುವವರಿಗೆ ಶಾಶ್ವತ ಉದ್ಯೋಗ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಕೈಗಾರಿಕೋದ್ಯಮಿಗಳಿಗೆ ಸೂಚಿಸಿದರು.

cm-siddaramaiah-instructed-to-industrialists-appoint-locals-for-industries
ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Dec 23, 2023, 10:54 PM IST

ಮೈಸೂರು: ಕೈಗಾರಿಕೆಗಳಿಗೆ ಸರ್ಕಾರ ಸರ್ಕಾರಿ ಜಮೀನು, ಖಾಸಗಿ ಭೂಮಿ, ನೀರು, ವಿದ್ಯುತ್ ಎಲ್ಲವನ್ನೂ ನೀಡಿದೆ ಹಾಗೂ ಪರವಾನಗಿ ನೀಡುವಾಗ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಷರತ್ತನ್ನೂ ವಿಧಿಸಿರುತ್ತದೆ. ಹಾಗಾಗಿ ಎಲ್ಲಾ ಕೈಗಾರಿಕೆಗಳು, ಉದ್ದಿಮೆದಾರರು ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಕೈಗಾರಿಕೋದ್ಯಮಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಉದ್ದಿಮೆದಾರರ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡುವುದು ನಿಮ್ಮ ಕರ್ತವ್ಯ. ಕೈಗಾರಿಕೆಗಳಿಗೆ ಭೂಮಿ ಕಳೆದುಕೊಂಡಿರುವವರಿಗೆ ಶಾಶ್ವತ ಉದ್ಯೋಗ ನೀಡಬೇಕು. ಅವರಿಗೆ ಯಾವುದೇ ಕಾರಣಕ್ಕೂ ಬಾಹ್ಯ ಗುತ್ತಿಗೆ ಅಥವಾ ತಾತ್ಕಾಲಿಕ ಉದ್ಯೋಗ ನೀಡಬಾರದು. ಈ ಮೂಲಕ ಸರ್ಕಾರದ ಉದ್ದೇಶ ಈಡೇರಬೇಕು ಎಂದರು.

ಹಲವರು ಉದ್ಯೋಗ ನೀಡಿದ್ದೀರಿ, ಕೆಲ ಕಂಪನಿಗಳಲ್ಲಿ ಉದ್ಯೋಗ ನೀಡಿಲ್ಲ ಎಂದು ಸ್ಥಳೀಯರು ಮನವಿ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹಲವರು ಉದ್ಯೋಗ ನೀಡಲು ಒಪ್ಪಿಗೆ ನೀಡಿದ್ದೀರಿ. ಯಾರು ಉದ್ಯೋಗ ನೀಡಿಲ್ಲವೋ ಅವರು ಈ ತಿಂಗಳೊಳಗಾಗಿ ಉದ್ಯೋಗ ನೀಡಿ ಎಂದರು. ನಂಜನಗೂಡು, ಚಾಮುಂಡೇಶ್ವರಿ, ವರುಣ ಹಾಗೂ ಹಿಮ್ಮಾವು ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ ಎಂಬ ದೂರುಗಳಿವೆ ಹಾಗಾಗಿ ಸಂಬಂಧಿಸಿದವರು ತಕ್ಷಣ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಂತ್ರಿಕ ನೈಪುಣ್ಯತೆಯುಳ್ಳ ಕಾರ್ಮಿಕರು ಸ್ಥಳೀಯವಾಗಿ ಲಭ್ಯವಿಲ್ಲದಿದ್ದರೆ ಮಾತ್ರ ಹೊರಗಿನವರನ್ನು ತೆಗೆದುಕೊಳ್ಳಿ ಹಾಗೂ ಸ್ಥಳೀಯರಿಗೆ ತರಬೇತಿ ನೀಡುವ ಮೂಲಕ ತಾಂತ್ರಿಕ ಪರಿಣತರನ್ನಾಗಿಸಿ. ನಮ್ಮಲ್ಲಿ ಮಾನವ ಸಂಪನ್ಮೂಲಕ್ಕೆ ಕೊರತೆಯಿಲ್ಲ. ಐಟಿಐ, ಡಿಪ್ಲೊಮಾ, ಪದವಿ ಪಡೆದಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಸರ್ಕಾರದಿಂದ ಕೌಶಲ ತರಬೇತಿ ನೀಡಿ ಪರಿಣಿತರನ್ನಾಗಿಸುತ್ತಿದೆ. ಇದರೊಂದಿಗೆ ತಾವೂ ತಮ್ಮ ಕಂಪನಿಗಳಲ್ಲಿರುವವರಿಗೆ ತರಬೇತಿ ನೀಡಿ ಕುಶಲಕರ್ಮಿಗಳನ್ನಾಗಿ ಮಾಡಿ ಎಂದರು.

ಕೆಲವು ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಗಳನ್ನು ಹತ್ತಿಕ್ಕುವ ಮೂಲಕ ಕಂಪನಿಯವರೇ ತಮ್ಮ ಪರವಾಗಿ ಬೇರೊಂದು ಸಂಘ ಹುಟ್ಟುಹಾಕುತ್ತಿದ್ದೀರಿ ಎಂಬ ದೂರುಗಳಿವೆ. ಯಾವುದೇ ಕಾರಣಕ್ಕೂ ಹಾಗಾಗಬಾರದು. ಸಂಘ ಕಟ್ಟಿಕೊಳ್ಳುವುದು ಅವರ ಸಾಂವಿಧಾನಿಕ ಹಕ್ಕು ಉದ್ದೇಶ ಪೂರ್ವಕವಾಗಿ ತೊಂದರೆ ಮಾಡಿದರೆ ಕಾರ್ಮಿಕ ಇಲಾಖೆಯಿಂದ ತಾವು ನ್ಯಾಯ ಪಡೆಯಬಹುದು. ಯಾವುದೇ ರಾಜ್ಯ, ರಾಷ್ಟ್ರ ಮುಂದುವರಿಯಬೇಕಾದರೆ ಕೃಷಿಯ ನಂತರದ ಸ್ಥಾನ ಕೈಗಾರಿಕೆಗಳದ್ದು, ನಾವು, ನೀವು ಕಾರ್ಮಿಕರು ಸೇರಿ ಕಾರ್ಯನಿರ್ವಹಿಸಿದರೆ ರಾಜ್ಯದ ಜಿಡಿಪಿ ಬೆಳವಣಿಗೆ ಆಗುತ್ತದೆ. ಹಾಗಾಗಿ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಬಿಎಂಟಿಸಿಯ ನೈಸ್ ಸಾರಿಗೆ ಸೇವೆಗಳನ್ನೂ ಪ್ರಯಾಣಿಕರು ಅತಿ ಹೆಚ್ಚಿನ ಉಪಯೋಗ ಪಡೆಯಬೇಕು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ..

ABOUT THE AUTHOR

...view details