ಮೈಸೂರು: ಮೈಸೂರು ಅರಮನೆ ಮಂಡಳಿ ವತಿಯಿಂದ ಇಂದು ಅರಮನೆ ಆವರಣದಲ್ಲಿ ನಡೆಯುತ್ತಿರುವ ಅರಮನೆ ಫಲಪುಷ್ಪ ಪ್ರದರ್ಶನ 2023 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು.
ಕಳೆದ ಬಾರಿಯಂತೆ ಈ ವರ್ಷವೂ ಕೂಡ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ ಜಿಲ್ಲೆಯ ಪ್ರಮುಖ ಆಕರ್ಷಕ ಕೇಂದ್ರಗಳಾದ ಸೋಮನಾಥೇಶ್ವರ ದೇವಾಲಯ, ಸಿರಿ ಧಾನ್ಯದಿಂದ ನಿರ್ಮಿಸಿದ ಮಲೆ ಮಹದೇಶ್ವರ ಪ್ರತಿಮೆ, ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ವಿಗ್ರಹ, ಬ್ರಾಂಡ್ ಮೈಸೂರು ಲೋಗೋ, 8 ಬಾರಿ ಅಂಬಾರಿ ಹೊತ್ತ ಅರ್ಜುನ ಆನೆಯ ಆಕೃತಿ, ನಾಲ್ವಡಿ ಕೃಷ್ಣ ರಾಜ ಒಡೆಯರ್, ಕೆಂಪ ನಂಜಮ್ಮಣಿ, ಶ್ರಿಕಂಠದತ್ತ ಒಡೆಯರ್, ಮೈಸೂರು ಅರಮನೆ ಮಂಡಳಿ ಹಾಗೂ ವಿವಿಧ ರೀತಿಯ ಪ್ರಾಣಿಗಳ ಪ್ರತಿಮೆಗಳು ಕಂಡುಬಂದವು.
ಹಣ್ಣುಗಳಿಂದ ಚಿತ್ರಿಸಿದ ಕಲಾಕೃತಿಗಳಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಆಕೃತಿಗಳು ಜನರ ಮನ ಸೆಳೆದವು. ವಿವಿಧ ರೀತಿಯ ಕಲಾಕೃತಿಗಳು, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್ ಹೀಗೆ ಮಕ್ಕಳಿಗೆ ಪ್ರಿಯವಾಗಿರುವ ಹೂಗಳಿಂದ ಅಲಂಕೃತಗೊಂಡ ವಿವಿಧ ಕಲಾಕೃತಿಗಳು, ಸೆಲ್ಫಿ ಪಾಯಿಂಟ್, ಕ್ರಿಸ್ಮಸ್ ಟ್ರೀಗಳು ಜನರನ್ನು ಆಕರ್ಷಿಸಿದವು.