ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದ ಸಿಎಂ, ಡಿಸಿಎಂ ಮೈಸೂರು:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಮತದಾನದ ಹಿಂದಿನ ದಿನ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಹರಕೆ ಹೊತ್ತಿದ್ದರು. ಆ ಹರಕೆಯನ್ನು ಇಂದು ಇಬ್ಬರು ಚಾಮುಂಡೇಶ್ವರಿ ತಾಯಿಯ ದೇವಾಲಯದ ಮುಂಭಾಗದಲ್ಲಿ ಈಡುಗಾಯಿ ಒಡೆಯುವ ಮೂಲಕ ತೀರಿಸಿದರು.
ಇಬ್ಬರು ಜೊತೆಯಾಗಿ ಚಾಮುಂಡೇಶ್ವರಿಗೆ ನಮಿಸುತ್ತಿರುವುದು. ಇಂದು ಚಾಮುಂಡಿ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಮುಂಭಾಗದಲ್ಲಿ ಇಬ್ಬರು ಜೊತೆಯಾಗಿ, ಚಾಮುಂಡೇಶ್ವರಿಗೆ ನಮಿಸಿ, ಈಡುಗಾಯಿ ಒಡೆದರು.
ಹರಕೆ ಹೊತ್ತಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ :ಮತದಾನದ ಮುನ್ನಾ ದಿನ ಮೇ-09 ರಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಶಕ್ತಿ ನೀಡು ಎಂದು ಚಾಮುಂಡಿ ತಾಯಿಯಲ್ಲಿ ಬೇಡಿಕೊಂಡು ಪೂಜೆ ಸಲ್ಲಿಸಿದ್ದರು. ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಾದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸುತ್ತಿರುವುದು. ದೇವಿಗೆ 2 ಸಾವಿರ ರೂ. ಸಮರ್ಪಣೆ:ಮನೆಯ ಯಜಮಾನಿಯರಿಗೆ ಮಾಸಿಕ ತಲಾ 2 ಸಾವಿರ ರೂ. ನೀಡುವ ಕಾಂಗ್ರೆಸ್ ಸರ್ಕಾರದ ಮಹತ್ವಾಂಕಾಂಕ್ಷಿ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಆ.30 ರಂದು ಚಾಲನೆ ದೊರೆಯಲಿದೆ. ಅದಕ್ಕೂ ಪೂರ್ವದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಮಂಗಳವಾರ ದೇವಿಗೆ ತಲಾ 2 ಸಾವಿರ ರೂ. ಕಾಣಿಕೆ ಸೇರಿದಂತೆ ಅರಿಶಿನ, ಕುಂಕುಮ, ಬಳೆ, ಸೀರೆ, ತೆಂಗಿನಕಾಯಿ, ಬಾಳೆಹಣ್ಣು, ನಂದಿನಿ ತುಪ್ಪ, ಮಲ್ಲಿಗೆ ಮಾಲೆ, ಗುಲಾಬಿ ಹೂವು ಇಟ್ಟು ಯೋಜನೆಯನ್ನು ದೇವಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಒಡೆದ ಕಾಯಿಯನ್ನು ಸ್ವಲ್ಪ ತಿನ್ನುವ ಮೂಲಕ ಫಲ ನಮ್ಮದಾಗುತ್ತದೆ ಎಂಬ ನಂಬಿಕೆಯಿಂದ ಚಾಮುಂಡೇಶ್ವರಿಗೆ ನಮಸ್ಕರಿಸಿ ಹೊರಟರು.
ಕಾವೇರಿ ವಿಚಾರಕ್ಕೆ ಪ್ರತಿಕ್ರಿಯೆ:ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರಿನ ಸಮಸ್ಯೆಗೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. 'ಮಧ್ಯಾಹ್ನದ ವೇಳೆಗೆ ಸುಪ್ರೀಂನಲ್ಲಿ ತಮಿಳುನಾಡಿನ ವಾದ ಮಂಡನೆ ಆಗಲಿದೆ. ನಂತರ ನಾವು ನಮ್ಮ ವಾದವನ್ನು ಮಂಡಿಸುತ್ತೇವೆ. ಜತೆಗೆ ನಾವು ಕೂಡಾ ರಾಜ್ಯದ ಹಿತಾಸಕ್ತಿ ಕಾಪಾಡುತ್ತೇವೆ' ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಕಾವೇರಿ ನೀರು ನಿರ್ವಹಣಾ ಸಮಿತಿಯ (CWRC) ಸಭೆ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಮಾಡಿರುವ ಶಿಫಾರಸು ಮಾಡಿತ್ತು. ಆದರೆ ಸಿಡಬ್ಲ್ಯುಆರ್ಸಿ ತೀರ್ಮಾನ ಅಂತಿಮ ಅಲ್ಲ. ನಾಳೆ ನಮ್ಮ ಮನವಿಯನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸುತ್ತೇವೆ. ಕೋರ್ಟ್ ನೀಡುವ ತೀರ್ಪಿನ ಅನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದರು.
ಇದನ್ನೂ ಓದಿ:ಕಾರಿನಲ್ಲಿ ಓಡಾಡುವವರು ಮಾಲೀಕರಲ್ಲ, ಬರಿಗಾಲಿನಲ್ಲಿ ಓಡಾಡುವವರು ನನ್ನ ಮಾಲೀಕರು: ಸಿಎಂ ಸಿದ್ದರಾಮಯ್ಯ