ಮೈಸೂರು : ಶಾಸಕರ ಅನುದಾನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಾರತಮ್ಯ ಮಾಡುತ್ತಿಲ್ಲ ಎಂದು ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ ಸಮರ್ಥಿಸಿಕೊಂಡರು.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡುತ್ತಿಲ್ಲ. ಅವರು ಸಮಗ್ರ ಕರ್ನಾಟಕದ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದಾರೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದರೆ, ರಾಜ್ಯದ ಒಂದು ಭಾಗಕ್ಕೆ ಅನ್ಯಾಯ ಮಾಡಿದಂತೆ ಎಂದು ಹೇಳಿದರು.
ಸಣ್ಣ ಕೈಗಾರಿಕೆಗಳು ಲಾಕ್ ಡೌನ್ ಸಡಿಲಿಕೆಗೊಂಡ ನಂತರ ಚೇತರಿಕೆಯಾಗುತ್ತಿದ್ದು, ಆತ್ಮನಿರ್ಭರ್ ಅಭಿಯಾನದಿಂದ ಸಣ್ಣ ಕೈಗಾರಿಕೆಗಳಿಗೆ ಉಪಯೋಗವಾಗುತ್ತಿದೆ. ಕೈಗಾರಿಕೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಚೇತರಿಕೆಯಾಗಲಿದೆ ಎಂದು ತಿಳಿಸಿದರು.
ಅಧಿಕಾರಿಗಳ ಸಭೆ :
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಮುನ್ನಜಿಲ್ಲಾ ಕೈಗಾರಿಕೆ ಕೇಂದ್ರದಲ್ಲಿ ಅಧಿಕಾರಿಗಳೊಂದಿಗೆ ಸಚಿವ ಪಾಟೀಲ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಆತ್ಮನಿರ್ಭರ ಭಾರತ ಯೋಜನೆಯಡಿ ಸಣ್ಣಕೈಗಾರಿಕೆಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆದುಕೊಳ್ಳಬಹುದು. ಈ ಬಗ್ಗೆ ದೆಹಲಿಗೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗೆ ಬಹಳಷ್ಟು ಅವಕಾಶವಿದ್ದು, ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತೆ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಓದಿ : ಡಿಕೆಶಿ ಭೇಟಿಯಾದ ಮಧು ಬಂಗಾರಪ್ಪ: ತೆನೆ ಇಳಿಸಿ 'ಕೈ' ಹಿಡಿಯಲು ಒಲವು
ಆಟೋಮೋಟಿವ್ ಎಕ್ಸೆಲ್, ಟಿವಿಎಸ್, ಎಲ್ & ಟಿ, ಏಷ್ಯನ್ ಪೈಂಟ್ಸ್ ಸೇರಿದಂತೆ ಅನೇಕ ಕೈಗಾರಿಕಾ ಕೇಂದ್ರಗಳಿಗೆ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ವಿವಿಧ ಸರಕನ್ನು ಸರಬರಾಜು ಮಾಡುತ್ತಿವೆ. ಈ ಕೈಗಾರಿಕೋದ್ಯಮಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅವರಿಗೆ ಇಲಾಖೆ ವತಿಯಿಂದ ಸ್ವಂತ ಕಟ್ಟಡಗಳನ್ನು ನಿರ್ಮಿಸಿ, ಉತ್ಪನ್ನಗಳನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಲು ಚಿಂತಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ನೂತನ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಇದಕ್ಕೆ ಅಗತ್ಯವಿರುವ ಜಾಗ ಖರೀದಿ ಹಾಗೂ ಇನ್ನಿತರ ವಿಚಾರಗಳ ಸಂಬಂಧ ಸಮಸ್ಯೆಗಳಿದ್ದರೆ ನನ್ನ ಬಳಿ ಚರ್ಚಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.