ಮೈಸೂರು : ಹಿಂದೆ ಭ್ರಷ್ಟಾಚಾರ ಮುಚ್ಚಿಹಾಕುವ ಸರ್ಕಾರ ಇತ್ತು. ಈಗ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸರ್ಕಾರ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದ್ದಾರೆ.
ಹಿಂದೆ ಭ್ರಷ್ಟಾಚಾರ ಮುಚ್ಚಿಹಾಕುವ ಸರ್ಕಾರ ಇತ್ತು: ಸಿಎಂ ಬಸವರಾಜ ಬೊಮ್ಮಾಯಿ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದ ಸಿಎಂ ಹೇಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರನ್ನು ನೋಡಿದ್ರೆ ನನಗೆ ತುಂಬಾ ಕನಿಕರ ಬರುತ್ತೆ. ದಕ್ಷ ಆಡಳಿತಗಾರ ಎನ್ನುವ ಸಿದ್ದರಾಮಯ್ಯನವರು ಹಿಂದೆ ಡಿಜಿಪಿಯೊಬ್ಬರ ಕೇಸನ್ನು ಮುಚ್ಚಿ ಹಾಕಿಲ್ವ? ಎಂದು ಪ್ರಶ್ನಿಸಿದರು.
ಈ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ಕೇಸನ್ನು ಸಿಐಡಿ ಕೊಟ್ರು ನಂತರ ಮುಚ್ಚಿಹಾಕಿದ್ರು. ಆ ಅಧಿಕಾರಿಯನ್ನು ಬಂಧಿಸಿದ್ರಾ?. ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರ ಕಂಡುಬಂದ ಕೂಡಲೇ ಎಡಿಜಿಪಿಯಂತಹ ಹಿರಿಯ ಅಧಿಕಾರಿಯನ್ನೇ ಬಂಧಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.
ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ : ನಿರಂತರವಾಗಿ ಮಳೆಯಾಗುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಕಳೆದಬಾರಿ ಎಲ್ಲೆಲ್ಲಿ ಭೂ ಕುಸಿತ ಆಗಿತ್ತು ಆ ಸ್ಥಳಗಳಲ್ಲಿರುವ ಜನರನ್ನು ಸ್ಥಳಾಂತರ ಮಾಡಲು ತಿಳಿಸಿದ್ದೇವೆ. ರೋಡ್ ಬ್ಲಾಕ್ ಆಗದಂತೆ ನೋಡಿಕೊಳ್ಳಲ್ಲು ತಿಳಿಸಿದ್ದು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ರಾತ್ರಿ ಮಡಿಕೇರಿಗೆ ಆರ್.ಅಶೋಕ್ ತೆರಳಲಿದ್ದಾರೆ ಎಂದರು.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿ ಕಡಲ ಕೊರೆತ ಉಂಟಾಗಿದೆ. ಜಿಲ್ಲಾಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಸರಿಯಾದ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ನಿಧಿಯಲ್ಲಿ ಈಗಾಗಲೇ 10 ಕೋಟಿಗೂ ಅಧಿಕ ಹಣ ಇದೆ. ಅವಶ್ಯಕತೆ ಇದ್ದರೆ ಮತ್ತಷ್ಟು ಹಣವನ್ನು ನೀಡಲಾಗುವುದು ಎಂದರು. ಪ್ರವಾಹದಿಂದ ಗ್ರಾಮಗಳು ಮುಳುಗಡೆ ಆಗುವ ಬಗ್ಗೆ ಶಾಶ್ವತ ಪರಿಹಾರ ಮಾಡಲಾಗುವುದು ಎಂದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಯಡಿಯೂರಪ್ಪ ಸರ್ಕಾರ 60 ಹಳ್ಳಿಗಳನ್ನು ಸ್ಥಳಾಂತರ ಮಾಡಿತ್ತು. ಆದರೆ ಪ್ರವಾಹ ಕಡಿಮೆ ಅದ ಮೇಲೆ ಜನ ಮತ್ತೆ ಅದೇ ಹಳ್ಳಿಗೆ ಹೋದರು.ಹೀಗಾಗಿ ಪ್ರವಾಹ ಪೀಡಿತ ಹಳ್ಳಿಗಳನ್ನು ಗೊತ್ತು ಮಾಡಿ ಎತ್ತರ ಜಾಗದಲ್ಲಿ ನಿರ್ಮಿತಿ ಕೇಂದ್ರಗಳನ್ನು ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ಈ ವರ್ಷ ಶಾಲಾ ಮಕ್ಕಳಿಗೆ ಶೂ ಮತ್ತು ಸೈಕಲ್ ವಿತರಿಸುವುದು ಸ್ವಲ್ಪ ವಿಳಂಬವಾಗಲಿದೆ. ಇದನ್ನು ಶಿಕ್ಷಣ ಸಚಿವರು ನೋಡಿಕೊಳ್ಳುತ್ತಾರೆ. ಬೆಂಗಳೂರು ರಸ್ತೆಗಳು ಕೆರೆಯಾಗುತ್ತಿರುವ ಬಗ್ಗೆ ಮಾತನಾಡಿ ಕೆರೆಗಳ ಸುತ್ತ ಮುತ್ತ ಮತ್ತು ಕೆರೆಗಳ ಮೇಲೆ ಮನೆ ಕಟ್ಟಿದ್ದಾರೆ ಇದರಿಂದ ಈ ಸಮಸ್ಯೆಯಾಗಿದ್ದು ರಾಜ ಕಾಲುವೆ ದುರಸ್ತಿಗಾಗಿ 16 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ ಕಾಲುವೆ ದುರಸ್ತಿಯಾದರೆ ಎಲ್ಲಾ ರೀತಿಯ ಸಮಸ್ಯೆ ಬಗೆಹರಿಯಲಿದೆ ಎಂದರು.
ಓದಿ :ಚಂದ್ರಶೇಖರ್ ಗುರೂಜಿ ಹತ್ಯೆ: ಹಂತಕರನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್