ಮೈಸೂರು : ಮಾರ್ಚ್ 9 ರಂದು ಕಾಂಗ್ರೆಸ್ ಕರೆ ನೀಡಿರುವ ಬಂದ್, ಯಾವ ಸೀಮೆಯ ಬಂದ್. ಎಲ್ಲಾದರೂ ಎರಡು ಗಂಟೆ ಬಂದ್ ಮಾಡುವುದನ್ನ ಜಗತ್ತಿನಲ್ಲಿ ಕೇಳಿದ್ದೀರಾ?. ಯಾವ ಕಾರಣಕ್ಕೂ ಬಂದ್ಗೆ ಜನ ಬೆಂಬಲ ಇಲ್ಲ. ಬಂದ್ ಯಶಸ್ವಿ ಆಗುವುದಿಲ್ಲ ಎಂದು ಮೈಸೂರಿನಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾರ್ಚ್ 9 ರಂದು ಕಾಂಗ್ರೆಸ್ಗೆ ಕರೆ ನೀಡಿರುವ ಎರಡು ಗಂಟೆ ಬಂದ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಎರಡು ಗಂಟೆ ಬಂದ್ ಅದ್ಯಾವ ಸೀಮೆಯ ಬಂದ್, ಎರಡು ಗಂಟೆ ಬಂದ್ ಮಾಡುವುದನ್ನ ಎಲ್ಲಾದರೂ ಕೇಳಿದ್ದೀರಾ. ಈ ಬಂದ್ ಅನ್ನು ಕಾಂಗ್ರೆಸ್ ಏಕೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದವರ ಕೈ ಭ್ರಷ್ಟಾಚಾರದಿಂದ ಕೆಸರಾಗಿದೆ. ಅವರಿಗೆ ನಮ್ಮ ವಿರುದ್ಧ ಬಂದ್ ಮಾಡುವ ನೈತಿಕತೆ ಇದೆಯೇ ಎಂದು ಸಿಎಂ ವಾಗ್ದಾಳಿ ನಡೆಸಿದರು.
ಮಾರ್ಚ್ 9 ರಂದು ಪಿಯುಸಿ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳು ಇವೆ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಸುಪ್ರೀಂಕೋರ್ಟ್ ಕೂಡ ಬಂದ್ ಮಾಡಬಾರದು ಎಂದು ಹೇಳಿದೆ. ಯಾವ ಕಾರಣಕ್ಕೂ ಬಂದ್ಗೆ ಜನ ಬೆಂಬಲ ಇಲ್ಲ, ಬಂದ್ ಯಶಸ್ವಿ ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದರು.
ಜಾಮೀನು ವಿಚಾರ ನನ್ನ ಗಮನಕ್ಕೆ ಬಂದಿಲ್ಲ : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಜಾಮೀನು ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾನು ಹೈಕೋರ್ಟ್ ತೀರ್ಮಾನವನ್ನ ವಿಶ್ಲೇಷಣೆ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ ಸಿಎಂ, ನಾನು ಲೋಕಾಯುಕ್ತ ಬಂದ್ ಮಾಡಿದ್ದರೆ ರಾಜಿನಾಮೆ ಕೋಡುತ್ತೇನೆ ಎಂಬ ಸಿದ್ದರಾಮಯ್ಯ ಸವಾಲಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಲೋಕಾಯುಕ್ತವನ್ನ ಬಂದ್ ಮಾಡಲಿಲ್ಲ, ಆದರೆ ಲೋಕಾಯುಕ್ತದ ಎಲ್ಲ ಹಲ್ಲುಗಳನ್ನು ಕಿತ್ತು ಹಾಕಿದರು. ಹಲ್ಲು ಕಿತ್ತ ಮೇಲೆ ಲೋಕಾಯುಕ್ತ ಇದ್ದರೆಷ್ಟು, ಇಲ್ಲದಿದ್ದರೆಷ್ಟು. ಲೋಕಾಯುಕ್ತ ಇದ್ದಿದ್ದರೆ ಎಸಿಬಿಗೆ ಏಕೆ ವರ್ಗವಾಗುತ್ತಿತ್ತು ಎಂದು ತಿರುಗೇಟು ನೀಡಿದರು.