ಮೈಸೂರು:ದಸರಾ ಉದ್ಘಾಟನೆ ಹಾಗೂ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮತ್ತು ನಾಳೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಹೊರಡಲಿದ್ದಾರೆ.
ಬಳಿಕ 3.30ಕ್ಕೆ ಕರಾಮುವಿ ಘಟಿಕೋತ್ಸವ ಭವನದಲ್ಲಿ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏರ್ಪಡಿಸಿರುವ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30ಕಕ್ಕೆ ಕೆ.ಆರ್.ಕ್ಷೇತ್ರದ ವಿದ್ಯಾರಣ್ಯಪುರಂನಲ್ಲಿರುವ ಶ್ರೀ ರಾಮಲಿಂಗೇಶ್ವರ ಉದ್ಯಾನವನದಲ್ಲಿ ನಡೆಯಲಿರುವ ಮೋದಿ ಯುಗ ಉತ್ಸವ್ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂದು ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ನಾಳೆ (ಸೆ.26) ಬೆಳಗ್ಗೆ 9ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬರಮಾಡಿಕೊಳ್ಳುವರು. ನಂತರ 9.10ಕ್ಕೆ ಅಲ್ಲಿಂದ ಹೊರಟು 9.30ಕ್ಕೆ ಚಾಮುಂಡಿಬೆಟ್ಟಕ್ಕೆ ರಾಷ್ಟ್ರಪತಿಗಳೊಂದಿಗೆ ಚಾಮುಂಡೇಶ್ವರಿ ದರ್ಶನ ಪಡೆಯುವರು. ಬೆಳಗ್ಗೆ ಚಾಮುಂಡಿಬೆಟ್ಟದ ಆವರಣದಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾ 2022ರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 10.45ಕ್ಕೆ ಚಾಮುಂಡಿಬೆಟ್ಟದಿಂದ ಹೊರಟು 11.05ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿರುವ ಸಿಎಂ ಅಲ್ಲಿಂದ 11.15ಕ್ಕೆ ರಾಷ್ಟ್ರಪತಿಗಳೊಂದಿಗೆ 12.15ಕ್ಕೆ ಹುಬ್ಬಳ್ಳಿಯತ್ತ ತೆರಳಲಿದ್ದಾರೆ. ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ದಸರಾ ಉದ್ಘಾಟನಾ ವೇದಿಕೆಯಲ್ಲಿ 13 ಗಣ್ಯರಿಗೆ ಅವಕಾಶ, ಯುವ ದಸರಾಗೆ ಕಿಚ್ಚ ಸುದೀಪ್ ಅಲಭ್ಯ: ಸಚಿವ ಸೋಮಶೇಖರ್