ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುತ್ತೆ: ಅರುಣ್ ಸಿಂಗ್ ವಿಶ್ವಾಸ - assembly election

ಈ ಬಾರಿ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವು ಅತ್ಯಧಿಕ ಸ್ಥಾನವನ್ನು ಪಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್​ ಸಿಂಗ್​​ ಹೇಳಿದರು.

clear-majority-for-bjp-in-state-says-arun-singh
ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ: ಅರುಣ್ ಸಿಂಗ್ ವಿಶ್ವಾಸ

By

Published : Apr 27, 2023, 3:11 PM IST

ಮೈಸೂರು:ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ವಿಭಜಿತ ಸ್ಥಿತಿಯಲ್ಲಿದೆ. ಅದರ ಸ್ಥಾನಗಳು ಇನ್ನಷ್ಟು ಕುಸಿಯಲಿವೆ. ಕೇಂದ್ರ - ರಾಜ್ಯ ಸರ್ಕಾರದ ಸಾಧನೆ, ಸಂಘಟನೆಯ ಆಧಾರದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೀಸಲಾತಿ, ಸಾಮಾಜಿಕ ನ್ಯಾಯದ ಕಡೆ ಗಮನ ಕೊಡಲಿಲ್ಲ. ಇದರಿಂದಾಗಿ ಅವರಿಗೆ ಹೇಳಲು ವಿಷಯಗಳೇ ಇಲ್ಲ ಎಂದು ಟೀಕಿಸಿದರು. ಈ ಬಾರಿ ಮೈಸೂರು ಭಾಗದಲ್ಲಿ ಪಕ್ಷವು ಅತ್ಯಧಿಕ ಶಾಸಕ ಸ್ಥಾನವನ್ನು ಗೆಲ್ಲಲಿದೆ, ಕರ್ನಾಟಕ ಮತ್ತು ದೇಶದ ಹಿತದಿಂದ ಮತ್ತೆ ಡಬಲ್ ಎಂಜಿನ್ ಸರ್ಕಾರವು ಕರ್ನಾಟಕದಲ್ಲಿ ರಚನೆ ಆಗಬೇಕು. ಕರ್ನಾಟಕದ ವಿಕಾಸ ಮತ್ತು ದೇಶದ ಅಭಿವೃದ್ಧಿ ಪರಸ್ಪರ ಜೋಡಿಸಿಕೊಂಡಿವೆ ಎಂದು ಹೇಳಿದರು.

ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ:ದೇಶ - ರಾಜ್ಯದಲ್ಲಿ ಪ್ರಧಾನಿ ಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಕೆಲಸಗಳು ಆಗಿವೆ. ಬಿಜೆಪಿ ಕಾರ್ಯಕರ್ತ ಮತ್ತು ಸಂಘಟನೆ ಆಧರಿತ ಪಕ್ಷವಾಗಿದ್ದು, 4 ಬಾರಿ ಶಾಸಕರಾದ ರಾಮದಾಸ್ ಅವರು ಹೊಸಬರಿಗೆ ಅವಕಾಶ ನೀಡಿದ್ದಾರೆ. ಹೆಚ್ಚು ಮತಗಳ ಅಂತರದಿಂದ ಹೊಸ ಅಭ್ಯರ್ಥಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಇಂಥ ದೇವದುರ್ಲಭ ಕಾರ್ಯಕರ್ತರನ್ನು ನಾವು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ತಿಳಿಸಿದರು.

ಮೋದಿಜೀ ನೇತೃತ್ವದಲ್ಲಿ 2 ಲಕ್ಷ ರೈತರಿಗೆ ಬ್ಯಾಂಕ್ ಖಾತೆ ತೆರೆದು ಭ್ರಷ್ಟಾಚಾರರಹಿತವಾಗಿ ಕಿಸಾನ್ ಸಮ್ಮಾನ್ ನಿಧಿ ಲಭಿಸುತ್ತಿದೆ. ಸುಮಾರು 4 ಲಕ್ಷ ಶೌಚಾಲಯ ನಿರ್ಮಾಣ, ಮನೆಮನೆಗೆ ನಳ್ಳಿ ನೀರು, ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ನಿರ್ಮಾಣ, ರಿಂಗ್ ರೋಡ್ ಸೇರಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ನಡೆದಿವೆ. ಸೆಮಿಕಂಡಕ್ಟರ್ ಕಾರ್ಖಾನೆ ಮೂಲಕ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ ಎಂದು ವಿವರ ನೀಡಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪಿಎಫ್‍ಐ ಜಾಲ ವಿಸ್ತಾರವಾಗಿತ್ತು. ದಂಗೆ, ಹಿಂದೂಗಳ ಹತ್ಯೆ ನಿರಂತರವಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಇಂಥ ಸ್ಥಿತಿ ಇತ್ತು. ಯಡಿಯೂರಪ್ಪ ಅವರ ಸರಕಾರವು ಗೋಹತ್ಯೆ ನಿಷೇಧಿಸಿತು. ಕೇಂದ್ರ ಸರ್ಕಾರವು ಪಿಎಫ್‍ಐ ನಿಷೇಧಿಸಿತು. ಕಾಂಗ್ರೆಸ್ ತುಷ್ಟೀಕರಣ ನೀತಿ ತನ್ನದಾಗಿಸಿಕೊಂಡಿತ್ತು. ಆದರೆ, ಬಿಜೆಪಿ ಎಲ್ಲರ ಅಭಿವೃದ್ಧಿಗೆ ಗಮನ ಕೊಟ್ಟಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಇಷ್ಟು ವರ್ಷ ಆಡಳಿತದಲ್ಲಿದ್ದರೂ ಸಾಮಾಜಿಕ ನ್ಯಾಯ ನೀಡಲು ಗಮನ ಕೊಡಲಿಲ್ಲ. ಬಿಜೆಪಿ ಸರ್ಕಾರವು ಎಸ್‍ಸಿ, ಎಸ್‍ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಸ್‍ಸಿ, ಎಸ್‍ಟಿ ಸಮುದಾಯಗಳಿಗೆ ಅವಮಾನ ಮಾಡುತ್ತಿತ್ತು. ಆದರೆ, ನಮ್ಮ ಸರ್ಕಾರದ್ದು ಕೇವಲ ಘೋಷಣೆಯಲ್ಲ. ಅದು ಅನುಷ್ಠಾನಕ್ಕೆ ಬಂದಿದೆ ಎಂದು ತಿಳಿಸಿದರು.
ಮುಸ್ಲಿಮರಿಗೆ ಅಸಾಂವಿಧಾನಿಕ ರೀತಿಯಲ್ಲಿ ಮೀಸಲಾತಿ ಕೊಡಲಾಗಿತ್ತು. ಅದನ್ನು ರದ್ದು ಮಾಡಿ, ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ತಲಾ ಶೇ.2ರಷ್ಟು ಮೀಸಲಾತಿ ಕೊಡಲಾಗಿದೆ. ಒಳ ಮೀಸಲಾತಿ ಪ್ರಕಟಿಸಿದ್ದೇವೆ. ಕಾಂಗ್ರೆಸ್ ಮುಸ್ಲಿಮರಿಗೆ ಮತ್ತೆ ಮೀಸಲಾತಿ ಕೊಡುವ ಮಾತನಾಡುತ್ತಿದೆ. ಯಾರ ಮೀಸಲಾತಿ ರದ್ದು ಮಾಡಿ ನೀವು ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೀರಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ನಾನು ಕೂಡ ವೋಟ್​ ಮಾಡುವೆ, ನೀವು ಕೂಡ ತಪ್ಪದೇ ವೋಟ್​ ಮಾಡಿ: ಸೆಲೆಬ್ರಿಟಿಗಳ ಮನವಿ

ABOUT THE AUTHOR

...view details