ಮೈಸೂರು :ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಮೇಲುಕೋಟೆ(Melukote)ಯಲ್ಲಿ ಚಲನಚಿತ್ರಗಳ ಚಿತ್ರೀಕರಣ ನಿಷೇಧಿ(Film Shooting ban)ಸಲು ಚಿಂತನೆ ನಡೆಸಲಾಗಿದೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತೆ ಪೂರ್ಣಿಮಾ(Purnima) ತಿಳಿಸಿದ್ದಾರೆ.
ತೆಲುಗು ಚಿತ್ರದ ಚಿತ್ರೀಕರಣದ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುವುದು ಹಾಗೂ ಕಲ್ಯಾಣಿ ಕಲುಷಿತಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಚಿತ್ರೀಕರಣ ನಿಷೇಧಿಸಲು ಚಿಂತನೆ ನಡೆಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಚಿತ್ರ ತಂಡದಿಂದ ಅವಾಂತರ ಉಂಟಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಇಲಾಖೆಯ ಇಂಜಿನಿಯರ್ ಸುರೇಶ್ ಮತ್ತು ಆರ್ಕಿಯಾಲಜಿಸ್ಟ್ ಎನ್ ಎಲ್ ಗೌಡ ಅವರನ್ನು ಮೇಲುಕೋಟೆಗೆ ಕಳುಹಿಸಿ ಅವರಿಂದ ಪ್ರಾಥಮಿಕ ವರದಿ ತರಿಸಿಕೊಂಡಿದ್ದರು.
ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರು ಕಲ್ಯಾಣಿ ಜೀರ್ಣೋದ್ಧಾರ ಮಾಡಿ, ಗಾರ್ಡನ್ಗಾಗಿ ಮೀಸಲಿಟ್ಟಿದ್ದ ಸ್ಥಳಕ್ಕೆ ಧಕ್ಕೆಯುಂಟು ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಆ ಕಾರಣಕ್ಕಾಗಿ ಚಿತ್ರ ತಂಡಕ್ಕೆ ನೋಟಿಸ್ ನೀಡುವುದರೊಂದಿಗೆ ಚಿತ್ರೀಕರಣಕ್ಕಾಗಿ ಅವರು ಪಾವತಿಸಿದ್ದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಚಿತ್ರೀಕರಣ ತಂಡಗಳಿಂದಾಗಿ ಪದೇಪದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ. ಅಲ್ಲದೇ, ಇಲಾಖೆ ನಿಯಮ ಮೀರಿ ಚಿತ್ರೀಕರಣ ಮಾಡುತ್ತಿರುವುದರಿಂದ ಸ್ಮಾರಕಗಳಿಗೆ ಧಕ್ಕೆಯುಂಟಾಗುವ ಅಪಾಯವಿದೆ.
ಈ ಕಾರಣಗಳಿಂದಾಗಿ ಸ್ಮಾರಕಗಳನ್ನು ಸಂರಕ್ಷಿಸಲು ಮೇಲುಕೋಟೆಯಲ್ಲಿ ಚಿತ್ರೀಕರಣ ನಿಷೇಧ ಮಾಡಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಲು ಸಾಧ್ಯವಾಗಲಿದೆ ಎಂದಿದ್ದಾರೆ.
ಘಟನೆ ಹಿನ್ನೆಲೆ :ಮೇಲುಕೋಟೆಯ ಪುರಾತನ ಕಲ್ಯಾಣಿಯಲ್ಲಿ ತೆಲುಗು ನಾಯಕ ನಟ ನಾಗ ಚೈತನ್ಯ ನಟಿಸುತ್ತಿರುವ ಬಂಗಾರ ರಾಜು-2 ಚಿತ್ರದ ಚಿತ್ರೀಕರಣಕ್ಕೆ ಪುರಾತತ್ವ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದರು. ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಯುತ್ತಿತ್ತು.
ಭಾನುವಾರ ಚೆಲುವ ನಾರಾಯಣಸ್ವಾಮಿ ಅಷ್ಠ ತೀರ್ಥೋದ್ಭವ ನಡೆದಿಥತ್ತು. ಈ ಉತ್ಸವಕ್ಕೆ ಚಿತ್ರತಂಡ ಅಡ್ಡಿಪಡಿಸಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಅಲ್ಲದೇ, ಕಲ್ಯಾಣಿಯ ನೀರಿಗೆ ಬಣ್ಣ ಬೆರೆಸಿ ಹಾಗೂ ಮೆಟ್ಟಿಲಿಗೆ ಬಣ್ಣ ಬಳಿದು ಚಿತ್ರೀಕರಣ ನಡೆಸುವ ಮೂಲಕ ಕಲ್ಯಾಣಿಯನ್ನು ಕಲುಷಿತಗೊಳಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಚಿತ್ರ ತಂಡವು ಕ್ರೇನ್ ಬಳಸಿ ಕಲ್ಯಾಣಿಯಲ್ಲಿ ಚಿತ್ರೀಕರಣ ನಡೆಸಿದೆ. ಅಂದು ಸುರಿದ ಭಾರಿ ಮಳೆಗೆ ಧಾರಾ ಮಂಟಪದ ಮುಂಭಾಗದಲ್ಲಿ ಗಾರ್ಡನ್ಗಾಗಿ ಮೀಸಲಿಟ್ಟಿದ್ದ ಸ್ಥಳದಲ್ಲಿ ಕ್ರೇನ್ ಹೂತುಕೊಂಡಿತ್ತು. ನಂತರ ಅದನ್ನು ತೆರವುಗೊಳಿಸಲಾಗಿದೆ. ಇದರಿಂದ ಗಾರ್ಡನ್ಗಾಗಿ ಮೀಸಲಿಟ್ಟಿದ್ದ ಸ್ಥಳಕ್ಕೆ ಧಕ್ಕೆಯುಂಟಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಓದಿ:ಸ್ಯಾಂಡಲ್ವುಡ್ ಯುವರತ್ನ ಪುನೀತ್ಗೆ 'ಮರಣೋತ್ತರ ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ