ಮೈಸೂರು:ವಸತಿ ನಿಲಯ ಶಾಲೆಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಶೋಷಣೆಗೆ ಒಳಗಾದವರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಇಂತಹ ಮಕ್ಕಳಿಗೆ ಉತ್ತಮ ವ್ಯವಸ್ಥೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಕವಶಿಸಂ ಸಂಘದ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಾಂಶುಪಾಲರು ಮತ್ತು ನಿಲಯ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜ್ಞಾನ ಯಾರದೋ ಒಬ್ಬರ ಸ್ವತ್ತಲ್ಲ. ಇಂದು ದೊಡ್ಡ ಅಧಿಕಾರ ಸ್ಥಾನದಲ್ಲಿರುವವರು ಬಡವರ ಮಕ್ಕಳೇ ಆಗಿದ್ದಾರೆ. ಹೀಗಾಗಿ ಬಡವರು ಹಾಗೂ ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾದವರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆಂಬುದು ನಮ್ಮ ಸರ್ಕಾರದ ಪ್ರಮುಖ ಧ್ಯೇಯ. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಅತ್ಯಂತ ಜವಾಬ್ದಾರಿ, ಹೊಣೆಗಾರಿಕೆ ಮತ್ತು ಬದ್ಧತೆಯಿಂದ ಕಲಿಸಬೇಕು ಎಂದು ಹೇಳಿದರು.
ಶಿಕ್ಷಣ ಎಂಬುದು ಬೆಳೆಯುವ ಮಕ್ಕಳಿಗೆ ಅತ್ಯಂತ ಪ್ರಮುಖವಾದ ವಿಷಯ. ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಎಂದು ನಮ್ಮ ಸಂವಿಧಾನದಲ್ಲಿದೆ. ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂದು ಬಾಬಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಹೀಗಾಗಿ ಸಂವಿಧಾನದ ತತ್ವ, ಆದರ್ಶ ಅನ್ವಯ ಶಿಕ್ಷಣ ಕಲಿಸಿದರೆ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ. ಇದರಿಂದ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ವಸತಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಕ್ಕಳಿಗೆ ಉತ್ತಮವಾಗಿ ಕಲಿಸಬೇಕು. ಪ್ರಸ್ತುತ ಸ್ಪರ್ಧಾತ್ಮಕ ಕಾಲದಲ್ಲಿ ಸೃಜನಶೀಲತೆಯಿಂದ ಕೂಡಿದ ಶಿಕ್ಷಣ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸುವ ಕೆಲಸ ಗುರುತರವಾದ ಜವಾಬ್ದಾರಿ ಎಂದು ಭಾವಿಸಿ ಮಕ್ಕಳ ಜೀವನ ರೂಪಿಸಬೇಕು ಎಂದು ತಿಳಿಸಿದರು.
ವಸತಿ ನಿಲಯದಲ್ಲೇ ತರಕಾರಿ ಸೊಪ್ಪು ಬೆಳೆಯಿರಿ: ಪ್ರತಿಯೊಂದು ಆಹಾರದಲ್ಲೂ ಪೌಷ್ಟಿಕಾಂಶ ಇರುತ್ತದೆ. ಮಕ್ಕಳಿಗೆ ದೈಹಿಕ ಸಾಮರ್ಥ್ಯ ಹೆಚ್ಚಿಸುವಂಥ ಊಟ ತಯಾರಿಸಿ ನೀಡಬೇಕು. ಪ್ರಮುಖವಾಗಿ ಅಡುಗೆ ತಯಾರಿಸುವಾಗ ಸ್ವಚ್ಛತೆ ಪಾಲನೆ ಮಾಡಬೇಕು. ಮಕ್ಕಳ ಆರೋಗ್ಯ ವೃದ್ಧಿಸುವಲ್ಲಿ ಬದ್ಧತೆ ಹಾಗೂ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು. ವಸತಿ ನಿಲಯದಲ್ಲೇ ತರಕಾರಿ, ಸೊಪ್ಪು ಬೆಳೆಯಬೇಕು. ಸಾವಯವ ಕೃಷಿಯಿಂದ ಬೆಳೆದ ತರಕಾರಿಗಳು ಹೆಚ್ಚು ಪೌಷ್ಟಿಕಾಂಶದಿಂದ ಕೂಡಿರುತ್ತದೆ. ಈ ಕೆಲಸದಲ್ಲಿ ವಸತಿ ನಿಲಯದ ಎಲ್ಲಾ ಸಿಬ್ಬಂದಿ ತೊಡಗಿಸಿಕೊಳ್ಳಬೇಕು. ಮಕ್ಕಳಿಗೂ ಕೂಡ ತರಕಾರಿಗಳಲ್ಲಿ ಇರುವ ಪೌಷ್ಟಿಕಾಂಶಗಳ ಬಗ್ಗೆ ತಿಳಿಸಿಕೊಡಬೇಕು. ಈ ಕ್ರಮವನ್ನು ರಾಜ್ಯದ ಎಲ್ಲಾ ವಸತಿ ಶಾಲೆಗಳಿಗೂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ. ಗಾಯಿತ್ರಿ,ವಿಧಾನ ಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ, ಕವಶಿಸಂ ಸಂಘದ ಸಲಹೆಗಾರ ಡಾ.ತುಕಾರಾಂ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಲಹೆಗಾರ ಬಸವರಾಜ್ ದೇವನೂರು, ಸಂಪನ್ಮೂಲ ವ್ಯಕ್ತಿ ಹೇಮಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಹಾಜರಿದ್ದರು.
ಇದನ್ನೂಓದಿ:ಶಿಕ್ಷಣ ವ್ಯವಸ್ಥೆಯನ್ನು ಸಂವಿಧಾನದ ಆಶಯದಂತೆ ಕಟ್ಟಬೇಕಿದೆ: ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ