ಮೈಸೂರು: ಶಾಲೆಯಲ್ಲಿ ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥ ಮೈಸೂರು:ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಸಾಲುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು. ಊಟದ ಬಳಿಕ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ಮಕ್ಕಳನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಡಿಹೆಚ್ಒ ಡಾ.ಕುಮಾರಸ್ವಾಮಿ, ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ತಿ.ನರಸೀಪುರ ತಹಶೀಲ್ದಾರ್ ಸುರೇಶ್ ಆಚಾರ್ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
''ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ತರಕಾರಿಯನ್ನು ಕಂಡು ಹಲ್ಲಿ ಬಿದ್ದಿದೆ ಎಂದು ವದಂತಿ ಹಬ್ಬಿಸಿದ್ದಾರೆ. ಎಲ್ಲ ಮಕ್ಕಳೂ ಆರೋಗ್ಯವಾಗಿದ್ದು, ಮನೆಗೆ ಕಳುಹಿಸಿದ್ದೇವೆ'' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಮಾಹಿತಿ ನೀಡಿದರು.
ಇತ್ತೀಚಿನ ಪ್ರಕರಣ:ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಕೆಸ್ತೂರಿನ ಹಿರಿಯ ಪ್ರಾಥಮಿಕ ಶಾಲೆ ನಂಬರ್-1ರಲ್ಲಿ ಘಟನೆ ನಡೆದಿತ್ತು. ಈ ಹಿಂದೆಯೂ ಇದೇ ಗ್ರಾಮದ ಮತ್ತೊಂದು ಪ್ರಾಥಮಿಕ ಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದರು. ಮಧ್ಯಾಹ್ನದ ಊಟ ಸೇವಿಸಿದ್ದ ಮಕ್ಕಳಲ್ಲಿ ದಿಢೀರ್ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತ ಶಿಕ್ಷಕರು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. 35 ಮಕ್ಕಳಿಗೆ ಡ್ರಿಪ್ ಹಾಕಲಾಗಿತ್ತು. ಈ ರೀತಿಯ ಘಟನೆಗಳಿಂದ ಆಕ್ರೋಶಗೊಂಡ ಗ್ರಾಮಸ್ಥರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಎಸಿ, ತಹಶೀಲ್ದಾರ್ ಭೇಟಿ ನೀಡಿದ್ದರು.
ಇದನ್ನೂ ಓದಿ:ರಾಮಮಂದಿರ ಉದ್ಘಾಟನೆಗೆ ದಿನಗಣನೆ; ಶ್ರೀರಾಮನ ಚಿತ್ರವಿರುವ ಬಾವುಟ, ಟಿಶರ್ಟ್ಗಳಿಗೆ ಹೆಚ್ಚಿದ ಡಿಮ್ಯಾಂಡ್