ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಿಮಿತ್ತ ಏರ್ಪಡಿಸಲಾಗಿರುವ ಮಕ್ಕಳ ದಸರಾ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮತ್ತು ಸಕಾಲ ಇಲಾಖೆ ಸಚಿವರಾದ ಬಿ.ಸಿ.ನಾಗೇಶ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.
ಮಕ್ಕಳ ದಸರಾ ಆಚರಣೆ : ನಗರದ ಜಗನ್ಮೋಹನ ಅರಮನೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ನಂತರ ದಸರಾ ಹಬ್ಬವು ತನ್ನ ಹಳೆಯ ಮೆರುಗು ಪಡೆದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಅದರಂತೆ ವಿದ್ಯಾರ್ಥಿಗಳಿಗೂ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಇಂತಹ ವೇದಿಕೆ ಅಗತ್ಯವಿದ್ದು, ಎಲ್ಲ ಮಕ್ಕಳಿಗೂ ಸಮಾನ ಅವಕಾಶ ನೀಡಲು ಸರ್ಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಬಳಿಕ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿರುವ ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಬಾಲ ಪ್ರತಿಭೆ ವಂಶಿಕಾ ಅಂಜನಿ ಕಶ್ಯಪ ಅತಿಥಿಯಾಗಿ ಪಾಲ್ಗೊಂಡು, ಕನ್ನಡ ಚಿತ್ರದ ರಾ..ರಾ.. ರಕ್ಕಮ್ಮ ಹಾಡಿಗೆ ನೃತ್ಯ ಮಾಡಿದರು. ಈ ಮೂಲಕ ನೆರೆದಿದ್ದ ವಿದ್ಯಾರ್ಥಿಗಳನ್ನು ಮನರಂಜಿಸಿದರು. ಜೊತೆಗೆ ಗಿನ್ನಿಸ್ ವರ್ಲ್ಡ್ ಆಫ್ ರೆಕಾರ್ಡ್ ದಾಖಲೆ ಮಾಡಿರುವ ಧವನಿ ಎಂಬ ಪುಟ್ಟ ಬಾಲಕಿ 224 ವಿಧಾನ ಸಭಾ ಕ್ಷೇತ್ರದ ಹೆಸರನ್ನು ಒಂದು ನಿಮಿಷದಲ್ಲಿ ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ವಿಜ್ಞಾನ ಹಾಗೂ ಕರಕುಶಲ ವಸ್ತು ಪ್ರದರ್ಶನ: ಮಕ್ಕಳ ದಸರಾ ನಿಮಿತ್ತ ಜಗನ್ಮೋಹನ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿರುವ ವಿಜ್ಞಾನ ಹಾಗೂ ಕರಕುಶಲ ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.