ಮೈಸೂರು: ಪ್ಲಾಸ್ಟಿಕ್ ನಿಷೇಧ ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಇಂತಹ ಕಷ್ಟದ ಕೆಲಸವನ್ನು ಸುಲಭವಾಗಿಸಿ, ಮೃಗಾಲಯವನ್ನ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲಾಗಿದೆ.
ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಈಗ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮೈಸೂರು ಮೃಗಾಲಯದಲ್ಲಿ 1500ಕ್ಕೂ ಹೆಚ್ಚಿನ ಪ್ರಾಣಿ ಪಕ್ಷಿಗಳಿವೆ. ಪ್ರತಿ ವರ್ಷ ಅಂದಾಜು 20ರಿಂದ 25 ಲಕ್ಷ ಪ್ರವಾಸಿಗರು ಈ ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಇಂತಹ ಪ್ರವಾಸಿಗರು ಪ್ರಾಣಿ ಪಕ್ಷಿಗಳನ್ನು ನೋಡಲು ಹೋಗುವ ಸಂದರ್ಭದಲ್ಲಿ ಕೈಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ತಿಂಡಿ-ತಿನಿಸುಗಳನ್ನು ತೆಗೆದುಕೊಂಡು ಹೋಗಿ ಮೃಗಾಲಯದಲ್ಲಿ ತಿಂದು ಎಲ್ಲಂದರಲ್ಲಿ ಬಿಸಾಡುವುದು ಸಾಮಾನ್ಯವಾಗಿದೆ.
ಹೀಗೆ ಬಿಸಾಡಿದ ಪ್ಲಾಸ್ಟಿಕ್ ಬಾಟಲ್ ಹಾಗೂ ಕವರ್ಗಳನ್ನು ತೆಗೆದು ಹಾಕುವುದೇ ಮೃಗಾಲಯದ ಕೆಲಸಗಾರರಿಗೆ ದೊಡ್ಡ ಸವಾಲಾಗಿತ್ತು. ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ಮೃಗಾಲಯ ಹೊಸ ಉಪಾಯವನ್ನು ಕಳೆದ ವರ್ಷ ಕಂಡು ಹಿಡಿದಿದೆ. ಇದಕ್ಕಾಗಿ ಮೃಗಾಲಯದ ಒಳಗಡೆ ಪ್ರವೇಶ ದ್ವಾರದ ಪಕ್ಕದಲ್ಲಿ ಒಂದು ಕೌಂಟರ್ ತೆರೆಯಲಾಗಿದೆ. ಈ ಕೌಂಟರ್ನಲ್ಲಿ 5 ಜನ ಸಿಬ್ಬಂದಿ ಇದ್ದು, ಪ್ರವಾಸಿಗರು ತರುವ ತಿಂಡಿಗಳ ಪ್ಲಾಸ್ಟಿಕ್ ಕವರ್ಗಳನ್ನ ಅಲ್ಲೇ ತೆಗೆದು ಪೇಪರ್ ಕವರ್ನಲ್ಲಿ ಹಾಕಿ ಕೊಡಲಾಗುತ್ತದೆ.
ಇನ್ನು, ನೀರಿನ ಬಾಟಲ್ಗೆ ಬಾರ್ ಕೋಡ್ ಇರುವ ಒಂದು ಸ್ಟಿಕ್ಕರ್ ಹಾಕಲಾಗುತ್ತದೆ. ಸ್ಟಿಕ್ಕರ್ ಹಾಕಿದ ತಕ್ಷಣ ಅವರಿಂದ 10 ರೂಪಾಯಿ ಹಣ ಪಡೆಯಲಾಗುತ್ತದೆ. ಮೃಗಾಲಯವನ್ನು ನೋಡಿದ ಪ್ರವಾಸಿಗರು ಮೃಗಾಲಯದಿಂದ ಹೊರ ಹೋಗುವಾಗ ಬಾರ್ ಕೋಡ್ ಇರುವ ಬಾಟಲ್ ನೀಡಿದರೆ 10 ರೂ. ವಾಪಾಸ್ ನೀಡಲಾಗುವುದು. ನಂತರ ಆ ಪ್ಲಾಸ್ಟಿಕ್ ಬಾಟಲ್ನ್ನು ಅಲ್ಲೇ ಡಬ್ಬದಲ್ಲಿ ಹಾಕಲಾಗುವುದು. ಈ ವ್ಯವಸ್ಥೆ ಕಳೆದ 1 ವರ್ಷದ ಹಿಂದೆ ಮೃಗಾಲಯದಲ್ಲಿ ಜಾರಿಗೆ ಬಂದಿದ್ದು, ಇದರಿಂದ ಮೃಗಾಲಯದ ಒಳಗೆ ಪ್ಲಾಸ್ಟಿಕ್ ಸಮಸ್ಯೆಯೇ ಇಲ್ಲದಂತಾಗಿದೆ.