ಮೈಸೂರು : ಕೇಂದ್ರ ಸರ್ಕಾರವು ನ್ಯಾಯಾಂಗ ವ್ಯವಸ್ಥೆಯಲ್ಲಿ, ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ನ್ಯಾಯಾಂಗದಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡಬಾರದು. ಈ ರೀತಿ ಹಸ್ತಕ್ಷೇಪ ಮಾಡುವುದು ಅಪಾಯಕಾರಿ ಬೆಳವಣಿಗೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ಭಾಷೆ ವಿಚಾರದಲ್ಲಿ ದೇಶ ವಿಭಜನೆ ಆಗುವ ಆಪಾಯ ಇದೆ. ಇದು ಯಾವಾಗ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನ ಪ್ರತಿನಿಧಿಗಳು ಜನರ ಮಾಲೀಕರು ಎಂಬ ಭಾವನೆ ಹೊಂದಿದ್ದಾರೆ. ರಾಜಕಾರಣಿಗಳು ಪರಸ್ಪರ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿದ್ದಾರೆ ಅಷ್ಟೇ. ಆದ್ರೆ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿಲ್ಲ. ಇದೇ ರೀತಿ ಮುಂದುವರೆದರೆ ಜನ ದಂಗೆ ಏಳುವ ಪರಿಸ್ಥಿತಿ ಬರುತ್ತದೆ. ಅದು ಯಾವಾಗ ಎಂದು ಹೇಳಲು ಸಾಧ್ಯವಿಲ್ಲ ಎಂದು ನಿ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ಕೆಂದ್ರ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ : ನ್ಯಾಯಾಂಗದ ಬಗ್ಗೆ ರಾಜಕಾರಣಿಗಳಿಗೆ ಅಷ್ಟೊಂದು ಜ್ಞಾನ ಇರುವುದಿಲ್ಲ. ಹೀಗಿರುವಾಗ ನ್ಯಾಯಾಧೀಶರ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸಂತೋಷ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನವೀಯ ಮೌಲ್ಯ ಅಗತ್ಯ : ಲೋಕಾಯುಕ್ತ ನ್ಯಾಯಮೂರ್ತಿ ಆಗುವ ಮುನ್ನ ನನಗೆ ಸಮಾಜದ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆದರೆ ಲೋಕಾಯುಕ್ತ ನ್ಯಾಯಮೂರ್ತಿ ಆದ ಮೇಲೆ ನಮ್ಮ ಸಮಾಜದಲ್ಲಿ ಎಷ್ಟು ಕಠಿಣ ಸಮಸ್ಯೆಗಳು ಇವೆ ಎಂಬುದು ತಿಳಿಯಿತು. ಸಮಾಜದಲ್ಲಿ ಶ್ರೀಮಂತನಾದರೆ ಸಾಕು, ಅವರಿಗೆ ಸಲಾಂ ಹೊಡೆಯುತ್ತಾರೆ. ಜೈಲಿನಿಂದ ಹೊರಗೆ ಬಂದವರಿಗೆ ಅದ್ಧೂರಿ ಸ್ವಾಗತ ಸಿಗುತ್ತದೆ. ಇವತ್ತಿನ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ. ಒಂದು ಬೇಕು ಹಾಗೂ ಮತ್ತಷ್ಟು ಬೇಕೂ ಎಂಬ ದುರಾಸೆ ಜನರಲ್ಲಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.