ಕರ್ನಾಟಕ

karnataka

ETV Bharat / state

8 ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ 1.29 ಲಕ್ಷ ಕೋಟಿ ಅನುದಾನ ಬಂದಿದೆ: ಪ್ರತಾಪ್ ಸಿಂಹ - central govt fund to state

ಕೇಂದ್ರ ಕಳೆದ 8 ವರ್ಷಗಳಲ್ಲಿ ಕರ್ನಾಟಕಕ್ಕೆ 1.29 ಲಕ್ಷ ಕೋಟಿ ರೂ. ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದರು.

central government has given Rs. 1.29 lakh crore to state in 8 years: says Pratap Simha
ಕೇಂದ್ರ ಸರ್ಕಾರ 8 ವರ್ಷಗಳಲ್ಲಿ ರಾಜ್ಯಕ್ಕೆ 1.29 ಲಕ್ಷ ಕೋಟಿ ಕೊಟ್ಟಿದೆ: ಪ್ರತಾಪ್ ಸಿಂಹ

By

Published : Jun 5, 2022, 8:51 AM IST

ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 8 ವರ್ಷಗಳಲ್ಲಿ ಕರ್ನಾಟಕಕ್ಕೆ 1.29 ಲಕ್ಷ ಕೋಟಿ ರೂ. ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ರಾಜ್ಯಕ್ಕೆ ನರೇಗಾ ಯೋಜನೆಯಡಿ 27,418 ಕೋಟಿ ರೂ. ನೀಡಿದ್ದು, ಕೆರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ 500 ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 19,374 ಕೋಟಿ ರೂ., ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 47.86 ಲಕ್ಷ ರೂ., ರೈತರಿಗೆ 8,704 ಕೋಟಿ ರೂ., ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2,111 ಕೋಟಿ ರೂ., ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 500 ಕೋಟಿ ರೂ., ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ನೀಡುವ ಸಾಲ ಯೋಜನೆಗೆ 19,950 ಕೋಟಿ ರೂ. ನೀಡಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಸದ ಪ್ರತಾಪ್ ಸಿಂಹ, ಸಚಿವ ಸೋಮಶೇಖರ್

ರಾಜ್ಯದಲ್ಲಿ 3,298 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 1.50 ಲಕ್ಷ ಕೋಟಿ ರೂ. ನಿಗದಿಪಡಿಸಲಾಗಿದೆ. 50,527 ಕೋಟಿ ರೂ. ಮೊತ್ತದ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮೈಸೂರು-ಬೆಂಗಳೂರು ಹೆದ್ದಾರಿಗೆ 9,551 ಕೋಟಿ ರೂ. ನೀಡಲಾಗಿದೆ. ಮೈಸೂರಿನ ವರ್ತುಲ ರಸ್ತೆಗೆ ಡಾಂಬರು ಹಾಕಲು 160 ಕೋಟಿ ರೂ., ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಮಡಿಕೇರಿಗೆ 4 ಸಾವಿರ ಕೋಟಿ ರೂ. ನೀಡಲಾಗಿದೆ. ರಾಜ್ಯದ 27 ಜಿಲ್ಲೆಗಳಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

'ಮೋದಿ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ರಾಷ್ಟ್ರದ ಹಿತಾಸಕ್ತಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಉಕ್ರೇನ್‌ ಯುದ್ಧದ ಬಿಕ್ಕಟ್ಟಿನ ವಿಚಾರದಲ್ಲಿ ಅಮೆರಿಕ, ಯುರೋಪ್‌ ರಾಷ್ಟ್ರಗಳ ಒತ್ತಡ ಇದ್ದರೂ ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ಸಾಧಿಸಿ ಕಡಿಮೆ ದರಕ್ಕೆ ತೈಲವನ್ನು ಖರೀದಿಸಿ, ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 9ರಿಂದ 10 ರೂ. ಕಡಿಮೆ ಮಾಡಿದ್ದಾರೆ' ಎಂದು ಹೇಳಿದರು

ಒಂದೇ ತಂತ್ರಾಂಶದಡಿ 5,700 ಕಾರ್ಖಾನೆ: ರಾಜ್ಯದಲ್ಲಿ ಸಹಕಾರ ಇಲಾಖೆ ವ್ಯಾಪ್ತಿಯಲ್ಲಿ ಬರುವ 5,700 ಕಾರ್ಖಾನೆಗಳನ್ನು ಒಂದೇ ತಂತ್ರಾಂಶದಡಿ ತರಬೇಕೆಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. ಸಹಕಾರ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲು ಕೇಂದ್ರ ಸಹಕಾರ ಸಚಿವರೊಂದಿಗೆ ಚರ್ಚಿಸಿದ್ದೇವೆ. ಎಲ್ಲ ರಾಜ್ಯಗಳ ಸಹಕಾರ ಇಲಾಖೆ ಮಂತ್ರಿ, ಅಧಿಕಾರಿಗಳನ್ನು ಕರೆಸಿ ಆಯಾ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ಓರಿಜಿನಲ್ ಕಾಂಗ್ರೆಸ್, ಬಿಜೆಪಿ ಇಲ್ಲ: ಕುಮಾರಸ್ವಾಮಿ ಕಿಡಿ

ಒಂದೇ ವರ್ಷದಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಹೀಗಾಗಿ ಆ ಕಾರ್ಯ ಪ್ರಗತಿಯಲ್ಲಿದೆ. ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲ ಕಾಯ್ದೆಗಳನ್ನು ಜಾರಿಗೊಳಿಸಲಿದೆ. ಅದಕ್ಕೆ ಪೂರಕ ಮಾಹಿತಿಯನ್ನು ಒದಗಿಸಿದ್ದೇವೆ‌ ಎಂದರು. 'ಕಳೆದ ವರ್ಷ ರಾಜ್ಯದ 3.86 ಲಕ್ಷ ರೈತರಿಗೆ 20,810 ಕೋಟಿ ರೂ. ಬೆಳೆ ಸಾಲ ನೀಡಿದ್ದೇವೆ. 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಬೆಳೆ ಸಾಲ ನೀಡುವುದಾಗಿ ಈ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ಪೈಕಿ 3 ಲಕ್ಷ ಹೊಸ ರೈತರಿಗೆ ಬೆಳೆ ಸಾಲ ನೀಡಲಾಗುತ್ತದೆ' ಎಂದು ಮಾಹಿತಿ ನೀಡಿದರು.

ABOUT THE AUTHOR

...view details