ಮೈಸೂರು: ಇಂದಿನಿಂದ ಮೈಸೂರು ಅರಮನೆಯಲ್ಲಿ ರಾಜಮನೆತನದವರ ಶರನ್ನವರಾತ್ರಿ ಆರಂಭವಾಗಿದ್ದು, ಸಿಂಹಾಸನ ಪೂಜೆ ಹಾಗೂ ಖಾಸಗಿ ದರ್ಬಾರ್ಅನ್ನು ಮಹರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದರು.
ರಾಜಮನೆತನದ ಸಂಸ್ಕೃತಿಯ ಪ್ರಕಾರ ಶರನ್ನವರಾತ್ರಿ ಆರಂಭವಾಗಿದ್ದು, ಬೆಳಗ್ಗೆಯಿಂದಲೇ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ನವರಾತ್ರಿಯ ಮೊದಲ ದಿನವಾದ ಇಂದು ಬೆಳಗ್ಗೆ 6.15ರಿಂದ 6.30ರ ಶುಭ ಲಗ್ನದಲ್ಲಿ ರತ್ನ ಖಚಿತ ಆಸನಕ್ಕೆ ಸಿಂಹವನ್ನು ಜೋಡಣೆ ಮಾಡುವ ಮೂಲಕ ರತ್ನ ಖಚಿತ ಸಿಂಹಾಸನ ಸಿದ್ಧಪಡಿಸಲಾಯಿತು.
ಅರಮನೆಯಲ್ಲಿ ಖಾಸಗಿ ದರ್ಬಾರ್ ಬೆಳಿಗ್ಗೆ 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ನೆರವೇರಿತು. ಬಳಿಕ 10 ಗಂಟೆಗೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿಗೆ ಸವಾರಿ ತೊಟ್ಟಿಯಲ್ಲಿ ಪೂಜೆ ನೆರವೇರಿತು. 10.45 ರಿಂದ 11.05ರ ಸಮಯದಲ್ಲಿ ಕಳಸ ಪೂಜೆ ಮತ್ತು ಸಿಂಹಾಸನಾರೋಹಣವನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿ ಕೆಲವು ಸಮಯ ಖಾಸಗಿ ದರ್ಬಾರ್ ನಡೆಸಿದರು.
ರತ್ನ ಖಚಿನ ಸಿಂಹಾಸನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಬಳಿಕ ಚಾಮುಂಡೇಶ್ವರಿ ದೇವಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಯಿತು. ಆ ಮೂಲಕ ಮೊದಲ ದಿನದ ರಾಜಮನೆತನದವರ ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮಗಳು ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆದವು. ಕೇವಲ ರಾಜಮನೆತನದವರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಂದಿನಿಂದ ಒಂಭತ್ತು ದಿನಗಳ ಕಾಲ ಪ್ರತಿದಿನ ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ಮಹಾರಾಜರು ಖಾಸಗಿ ದರ್ಬಾರ್ ನಡೆಸಲಿದ್ದಾರೆ.