ಹುಲಿ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಮೈಸೂರು:ಕಡಕೊಳ ಕೈಗಾರಿಕಾ ಪ್ರದೇಶದ ಟಿವಿಎಸ್ ಕಂಪನಿಯ ಕಾಂಪೌಂಡ್ ಸಮೀಪ ಹುಲಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಜಯಪುರ ಹೋಬಳಿಯ ಸಿಂಧುವಳ್ಳಿ, ಬ್ಯಾತಹಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ ಗ್ರಾಮಗಳ ಮಧ್ಯದಲ್ಲಿ ಹುಲಿ ಓಡಾಟ ಹೆಚ್ಚಾಗಿರುವುದರಿಂದ ಇಲಾಖೆ, ಸೆರೆಗೆ ಬೋನ್ ಇಟ್ಟಿದೆ. ಸಿಸಿ ಕ್ಯಾಮೆರಾ ಮೂಲಕ ಚಲನವಲನಗಳ ಪತ್ತೆ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸೂಕ್ತ ಕಾರ್ಯಾಚರಣೆ ಮೂಲಕ ಹುಲಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದರು. ಟಿವಿಎಸ್ ಕಂಪನಿಯ ನೌಕರರು ರಾತ್ರಿಪಾಳಿ ಮುಗಿಸಿ ಹೋಗುವಾಗ ಎಚ್ಚರಿಕೆಯಿಂದಿರಿ ಎಂದು ಜಿ.ಟಿ.ದೇವೇಗೌಡ ಮನವಿ ಮಾಡಿದರು. ಎಸಿಎಫ್ ಲಕ್ಷ್ಮಿಕಾಂತ್, ಆರ್.ಎಫ್.ಒ ಸುರೇಂದ್ರ, ಸೇರಿದಂತೆ ಮತ್ತಿತರರು ಇದ್ದರು.
ಮಂಡ್ಯ- ವಾಹನ ಡಿಕ್ಕಿ, ಚಿರತೆ ಸಾವು:ಮಂಡ್ಯತಾಲೂಕಿನ ಬಾಚನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸುಮಾರು ಮೂರು ವರ್ಷದ ಗಂಡು ಚಿರತೆ ಮೃತಪಟ್ಟಿದೆ. ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಅಪಘಾತದ ತೀವ್ರತೆಗೆ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ನಡುರಸ್ತೆಯಲ್ಲೇ ಚಿರತೆ ಬಿದ್ದಿರುವುದನ್ನು ಗಮನಿಸಿದ ಇತರೆ ವಾಹನ ಸವಾರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಚಿರತೆ ಸಮೀಪಕ್ಕೆ ಹೋಗಿ ಪರಿಶೀಲಿಸಿದಾಗ ಮೃತಪಟ್ಟಿರುವುದು ಖಾತರಿಯಾಗಿದೆ. ಕೂಡಲೇ ಕಳೇಬರವನ್ನು ಪಟ್ಟಣದಲ್ಲಿರುವ ಉಪ ವಲಯ ಅರಣ್ಯ ಇಲಾಖೆ ಕಚೇರಿ ಆವರಣಕ್ಕೆ ರವಾನಿಸಿದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋದಾಗ ಸುಮಾರು ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವುದು ಕಂಡುಬಂದಿದೆ. ಕಚೇರಿ ಆವರಣಕ್ಕೆ ಕಳೇಬರವನ್ನು ತರಲಾಗಿದ್ದು, ಮೇಲಾಧಿಕಾರಿಗಳ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ರಾತ್ರಿಯಾಗಿರುವುದರಿಂದ ಬೆಳಿಗ್ಗೆ ಸ್ಥಳ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಮಹಾದೇವು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹುಲಿ ಪ್ರತ್ಯಕ್ಷವಾದ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರು: ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ