ಮೈಸೂರು: ನಗರದ ಸಿಸಿಬಿ ಪೊಲೀಸರು 2 ಪ್ರತ್ಯೇಕ ಪ್ರಕರಣದಲ್ಲಿ 23 ಲಕ್ಷ ಮೌಲ್ಯದ 46 ಕೆಜಿಗೂ ಹೆಚ್ಚು ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ನಾಲ್ವರು ಆರೋಪಿಗಳನ್ನು 2 ಪ್ರಕರಣದಲ್ಲಿ ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇತ್ತೀಚೆಗೆ ಹಲವಾರು ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಮಾರಾಟದ ಜಾಲಗಳ ಮೇಲೆ ದಾಳಿ ಮಾಡಿದ್ದು, ಪ್ರತ್ಯೇಕ 2 ಪ್ರಕರಣಗಳನ್ನು ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಮೊದಲ ಪ್ರಕರಣ:ಮೈಸೂರು ಸಿಸಿಬಿ ಪೊಲೀಸರ ಗಾಂಜಾ ನಿಗ್ರಹ ಕಾರ್ಯಾಚರಣೆ ನಿರಂತರವಾಗಿ ಮುಂದುವರೆದಿದ್ದು, ಅಕ್ಟೋಬರ್ 22 ರಂದು ಪಡೆದ ಖಚಿತ ಮಾಹಿತಿ ಮೇರೆಗೆ ಬನ್ನಿಮಂಟಪದ ಹನುಮಂತನಗರ ರಸ್ತೆಯಲ್ಲಿ ದಾಳಿ ಮಾಡಿ ಅಲ್ಲಿ ಅಕ್ರಮವಾಗಿ ಕಾರಿನೊಳಗಡೆ ಗಾಂಜಾ ಇಟ್ಟುಕೊಂಡು ಗಿರಾಕಿಗಳನ್ನು ಅಲ್ಲಿಗೆ ಕರೆಯಿಸಿಕೊಂಡು ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 5 ಕೆ.ಜಿ. 691 ಗ್ರಾಂ ತೂಕದ ಗಾಂಜಾ, ಒಂದು ಮಾರುತಿ 800 ಕಾರು, 10,000 ರೂ ನಗರದು ಹಾಗೂ 3 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡು ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎರಡನೇ ಪ್ರಕರಣ:ಅಕ್ಟೋಬರ್ 23 ರಂದು ಖಚಿತ ಮಾಹಿತಿ ಮೇರೆಗೆ ನರಸಿಂಹರಾಜ ಪೊಲೀಸ್ ಠಾಣೆ ಸರಹದ್ದಿನ ಮಂಡಿ ಮೊಹಲ್ಲಾದ 2ನೇ ಈದ್ಧಾದ ಸಿ.ವಿ. ರಸ್ತೆಯ 7ನೇ ಕ್ರಾಸ್ನಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ 41 ಕೆ.ಜಿ. ತೂಕದ ಗಾಂಜಾವನ್ನು ವಶಪಡಿಸಿಕೊಂಡು ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರತ್ಯೇಕ 2 ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸದರಿ ಗಾಂಜಾವನ್ನು ಎಲ್ಲಿಂದ ಮತ್ತು ಯಾರಿಂದ ಖರೀದಿ ಮಾಡಿಕೊಂಡು ತರುತ್ತಿದ್ದಾರೆ ಎಂಬ ಬಗ್ಗೆ ಹಾಗೂ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಮೈಸೂರು ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:30 ಕೋಟಿ ಬೆಲೆ ಬಾಳುವ ಡ್ರಗ್ಸ್ ವಶ.. ಮೂವರ ಬಂಧನ