ಮೈಸೂರು : ಹುಕ್ಕಾಬಾರ್ ನಡೆಸುತ್ತಿದ್ದ ಲೆ - ಟೆರೇಸ್ ಕೆಫೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ವಿ. ವಿ ಮೊಹಲ್ಲಾದಲ್ಲಿರುವ ಲೆ - ಟೆರೇಸ್ ಕೆಫೆಯ ಮೇಲೆ ದಾಳಿ ಮಾಡಿ ಕಾನೂನು ಬಾಹಿರವಾಗಿ ಯುವಕ - ಯುವತಿಯರಿಗೆ ಹುಕ್ಕಾ ಸೇವನೆ ಮಾಡಲು ಅವಕಾಶ ನೀಡುತ್ತಿದ್ದ ಕೆಫೆಯ ಮಾಲೀಕ ಮತ್ತು ವ್ಯವಸ್ಥಾಪಕ ಸೇರಿದಂತೆ ಹುಕ್ಕಾ ಸೇವನೆ ಮಾಡುತ್ತಿದ್ದ ಒಬ್ಬ ಯುವತಿ ಹಾಗೂ 58 ಮಂದಿಗೆ 11,600 ರೂ. ದಂಡ ವಿಧಿಸಲಾಗಿದೆ.
ಡಿಸಿಪಿ ಜಾಹ್ನವಿ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಎಸ್ ಎನ್ ಸಂದೇಶ್ ಕುಮಾರ್ ಉಸ್ತುವಾರಿಯಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಎ. ಮಲ್ಲೇಶ್, ಎಸ್‌ಐ ರಾಜು ಕೋನಕೇರಿ, ಎಎಸ್‌ಐ ರಾಜು ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.
ಗಾಂಜಾ ಮಾರುತ್ತಿದ್ದವನ ಬಂಧನ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತನಿಂದ 4 ಕೆಜಿ 90 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಆರೋಪಿಯ ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಲಷ್ಕರ್ ಪೊಲೀಸ್ ಠಾಣೆ ಸರಹದ್ದಿನ ಗುಡ್ ಶಫರ್ಡ್ ಕಾನ್ವೆಂಟ್ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಪೆಡ್ಲರ್‌ಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ರಾಜಸ್ಥಾನದ ಮೂಲದ ಆರೋಪಿಯನ್ನು ಬಂಧಿಸಲಾಗಿದೆ.
ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಗಾಂಜಾವನ್ನು ವಿಶಾಖಪಟ್ಟಣಂನಿಂದ ಖರೀದಿಸಿ ತಂದಿರುವುದಾಗಿ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದಾನೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿಪಿ ಎಸ್. ಜಾಹ್ನವಿ ಅವರ ಮಾರ್ಗದರ್ಶನದಲ್ಲಿ, ಸಿಸಿಬಿ ಘಟಕದ ಎಸಿಪಿ ಅವರಾದ ಎಸ್. ಎನ್ ಸಂದೇಶ್‌ಕುಮಾರ್ ಅವರ ಉಸ್ತುವಾರಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎ. ಮಲ್ಲೇಶ್, ಎಸ್. ಐ ರಾಜು ಕೋನಕೇರಿ, ಎಎಸ್‌ಐ ರಾಜು ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.