ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಕರ್ನಾಟಕದ ರೈತರು ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ಬೆಳೆಗಳನ್ನು ಕಾಪಾಡಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದು ನೀರು ಹರಿಸುತ್ತಿದೆ. ಇದನ್ನು ಕೇಳುವವರು ಯಾರು? ಕರ್ನಾಟಕದ ರೈತರ ಕಣ್ಣೀರನ್ನು ಒರೆಸುವವರು ಯಾರು? ತಮಿಳುನಾಡಿನಲ್ಲಿ ಲೆಕ್ಕವಿಲ್ಲದೆ, ಲಂಗು-ಲಗಾಮಿಲ್ಲದೆ ಬೆಳೆ ಬೆಳೆಯುತ್ತಿದ್ದಾರೆ. ಪ್ರತಿ ಬಾರಿಯೂ ತಮಿಳುನಾಡು ಕರ್ನಾಟಕದ ಮೇಲೆ ಪಿತೂರಿ ಮಾಡುತ್ತದೆ ಎಂದು ಕಿಡಿ ಕಾರಿದರು.
ತಮಿಳುನಾಡಿನ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನೀರು ಬಿಟ್ಟಿದೆ. ನ್ಯಾಯಾಲಯಕ್ಕೆ ಹೋಗುವ ಮೂಲಕ ಹೆದರಿಸುತ್ತಿದ್ದಾರೆ. ನಿರ್ವಹಣಾ ಸಮಿತಿ ತೀರ್ಮಾನ ಸರಿಯಲ್ಲ. ನಿಜಲಿಂಗಪ್ಪನವರಿಂದ ಬಸವರಾಜ್ ಬೊಮ್ಮಾಯಿಯವರ ತನಕ ಎಲ್ಲಾ ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಈ ಹಿಂದೆ ಬಂಗಾರಪ್ಪನವರು ಸಿಎಂ ಆಗಿದ್ದಾಗ ಕಾವೇರಿ ನೀರಿನ ವಿಚಾರದಲ್ಲಿ ದಿಟ್ಟ ನಿಲುವು ತೆಗೆದುಕೊಂಡಿದ್ದರು. ನಾವೆಲ್ಲರೂ ಬಂಗಾರಪ್ಪನವರಿಗೆ ಬೆಂಬಲ ನೀಡಿದ್ದೆವು. ಆದರೆ ಬಂಗಾರಪ್ಪನವರು ತೋರಿದಂತಹ ದಿಟ್ಟ ನಿಲುವನ್ನು ಈಗಿನ ಮುಖ್ಯಮಂತ್ರಿಗಳು ತೋರುತ್ತಿಲ್ಲ. ಸಿದ್ದರಾಮಯ್ಯನವರು ಒತ್ತಡಕ್ಕೆ ಸಿಲುಕಿದ್ದಾರೆ. ಅವರು ಯಾವ ಒತ್ತಡಕ್ಕೆ ಸಿಲುಕಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಹೆದರಬೇಕಾದ ಅವಶ್ಯಕತೆ ಇಲ್ಲ. ಅವರು ಎರಡನೇ ಬಾರಿ ಕಾಟಾಚಾರಕ್ಕೆ ಸಿಎಂ ಆಗಿದ್ದಾರೆ. ಅವಧಿ ಮುಗಿಸಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ ಎಂದು ವಾಟಳ್ ಹೇಳಿದರು.
ಕಾವೇರಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಿಲುವು ಸರಿಯಿಲ್ಲ. ಹೇಳದೆ ಕೇಳದೆ ನೀರು ಬಿಟ್ಟಿದ್ದಾರೆ. ನೀರು ಬಿಟ್ಟ ಮೇಲೆ ಯಾಕೆ ಸರ್ವ ಪಕ್ಷ ಸಭೆ ಕರೆಯಬೇಕು. ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಮೊದಲು ರಾಜ್ಯದ ಜನರ ಹಿತ ಕಾಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರ ಶಿವಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಿಎಂ ಸರ್ವಪಕ್ಷ ಸಭೆ ಕರೆಯಲಿ- ಕುರುಬೂರು : ಮತ್ತೊಂದೆಡೆ ಕಾವೇರಿ ನೀರು ಬಿಟ್ಟಿರುವ ವಿಚಾರವಾಗಿ, ಕಬಿನಿ ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹರಿಸುತ್ತಿರುವ ನೀರು ಕೂಡಲೇ ನಿಲ್ಲಿಸದಿದ್ದರೆ, ಸಚಿವರುಗಳಿಗೆ ಘೇರಾವ್ ಮಾಡಬೇಕಾಗುತ್ತದೆ. ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಕಾವೇರಿ ಭಾಗದ ರೈತರ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.