ಕರ್ನಾಟಕ

karnataka

ETV Bharat / state

ನ್ಯಾಯಾಧೀಶೆ ದೂರು; ಮೈಸೂರಲ್ಲಿ ವೈದ್ಯೆ ಸೇರಿ ಮೂವರ ವಿರುದ್ಧ ಪ್ರಕರಣ

Judge complaints against three including doctor: ನ್ಯಾಯಾಧೀಶೆ ಶಿಲ್ಪಾ ಅವರು ಚೆಲುವಾಂಬ ಆಸ್ಪತ್ರೆಯ ವೈದ್ಯೆ ಡಾ. ಚೈತ್ರಾ ಸೇರಿ ಆಸ್ಪತ್ರೆಯ ಮೂವರ ವಿರುದ್ಧ ಲೋಕಾಯುಕ್ತ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.

Mysuru
ಮೈಸೂರು

By ETV Bharat Karnataka Team

Published : Nov 7, 2023, 1:47 PM IST

Updated : Nov 10, 2023, 10:23 AM IST

ಮೈಸೂರು: 12 ವರ್ಷದ ಬಾಲಕಿಯನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ನೀಡಿದ ದೂರಿನ ಹಿನ್ನೆಲೆ ಸರ್ಕಾರಿ ಮಕ್ಕಳ ಆಸ್ಪತ್ರೆಯ ವೈದ್ಯೆ ಸೇರಿದಂತೆ ಮೂವರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ ಜೆ. ಶಿಲ್ಪಾ ನೀಡಿದ ದೂರಿನನ್ವಯ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ವೈದ್ಯೆ ಡಾ. ಚೈತ್ರಾ ಸೇರಿದಂತೆ ಆಸ್ಪತ್ರೆಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:ಕೊಡಗು ಮೂಲದ ದಂಪತಿಯ 12 ವರ್ಷದ ಪುತ್ರಿಗೆ ಶ್ವಾಸಕೋಶ ಹಾಗೂ ಉಸಿರಾಟ ಸಮಸ್ಯೆ ಇತ್ತು. ಹೀಗಾಗಿ ತಮ್ಮ ಮಗಳನ್ನು ಅಕ್ಟೋಬರ್ 26ರ ರಾತ್ರಿ ಚೆಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಕೊಡಗು ಮೂಲದ ದಂಪತಿ ಅವರು ನ್ಯಾಯಾಧೀಶೆ ಶಿಲ್ಪಾ ಅವರ ಸ್ವಗ್ರಾಮದವರಾಗಿದ್ದಾರೆ. ಅವರ ಕೋರಿಕೆಯ ಹಿನ್ನೆಲೆ ಅಕ್ಟೋಬರ್ 26ರ ರಾತ್ರಿ ಸ್ವತಃ ನ್ಯಾಯಾಧೀಶೆ ಶಿಲ್ಪಾ ಅವರೇ ಚೆಲುವಾಂಬ ಆಸ್ಪತ್ರೆಗೆ ಆಗಮಿಸಿ ಬಾಲಕಿಯನ್ನು ಅಡ್ಮಿಟ್​ ಮಾಡಿಕೊಳ್ಳುವಂತೆ ವೈದ್ಯರಿಗೆ ಹೇಳಿದ್ದರು.

ಆದರೆ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಬೆಡ್ ಖಾಲಿ ಇಲ್ಲ ಎಂದು ಹೇಳಿ ಕಳುಹಿಸಲಾಗಿತ್ತು. ದಂಪತಿ ಮಗುವನ್ನು ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಈ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ದಿನಕ್ಕೆ 25 ರಿಂದ 30 ಸಾವಿರ ರೂಪಾಯಿ ವೆಚ್ಚವಾಗುತ್ತದೆ ಎಂದು ದಂಪತಿಗೆ ತಿಳಿದು ಬಂದಿತ್ತು. ಪುನಃ ಅಂದು ರಾತ್ರಿಯೇ ಸರ್ಕಾರಿ ಆಸ್ಪತ್ರೆಗೆ ಕರೆತಂದು ಕೆಲವು ಗಂಟೆಗಳ ಕಾಲ ದಂಪತಿ ಪರವಾಗಿ ನ್ಯಾಯಾಧೀಶೆ ಹೋರಾಟ ನಡೆಸಿದ್ದರು. ಕೊನೆಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿಕೊಂಡಿದ್ದರು. ನವೆಂಬರ್ 4 ರಂದು ಚಿಕಿತ್ಸೆ ಫಲಕಾರಿಯಾಗದೇ 12 ವರ್ಷದ ಬಾಲಕಿ ಸಾವನ್ನಪ್ಪಿದ್ದಳು.

ಈ ಸಂಬಂಧ ನ್ಯಾಯಾಧೀಶೆ ಶಿಲ್ಪಾ, ಸಕಾಲಕ್ಕೆ ಚಿಕಿತ್ಸೆ ನೀಡದೆ ಕರ್ತವ್ಯದಲ್ಲಿದ್ದ ವೈದ್ಯೆ ಡಾ. ಚೈತ್ರಾ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೇವರಾಜ ಪೊಲೀಸ್ ಠಾಣೆಗೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ದೂರಿನಲ್ಲಿ ವೈದ್ಯೆ ಸೇರಿದಂತೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಮುತ್ತುರಾಜ್ ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಹಣದ ಬೇಡಿಕೆ ಆರೋಪ: ಕರವೇ ಜಿಲ್ಲಾಧ್ಯಕ್ಷನ ವಿರುದ್ಧ ದೂರು.. ಆರೋಪ - ಪ್ರತ್ಯಾರೋಪ

Last Updated : Nov 10, 2023, 10:23 AM IST

ABOUT THE AUTHOR

...view details