ಸ್ಯಾಂಟ್ರೋ ರವಿ ಪ್ರಕರಣ.. ನನ್ನ ರೀತಿಯಲ್ಲೇ ಎಷ್ಟೋ ಹುಡುಗಿಯರ ಜೀವನ ಹಾಳು ಮಾಡಿದ್ದಾನೆ: ದೂರುದಾರೆ ಆರೋಪ ಮೈಸೂರು : ಸ್ಯಾಂಟ್ರೋ ರವಿ ಎಷ್ಟು ಯುವತಿಯರ ಜೀವನವನ್ನು ಹಾಳು ಮಾಡಿದ್ದಾನೆ ಎಂಬುದು ಗೊತ್ತಿಲ್ಲ. ಇನ್ನು ಯಾರಿಗೂ ಆತನಿಂದ ತೊಂದರೆ ಆಗಬಾರದು. ಆತನಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕು ಎಂದು ದೂರುದಾರ ಮಹಿಳೆ ಹೇಳಿದ್ದಾರೆ. ನಮ್ಮ ಪೊಲೀಸರು ಕಷ್ಟದ ಪ್ರಕರಣಗಳನ್ನು ಬೇಗ ಭೇದಿಸುತ್ತಾರೆ. ಆದರೆ ಸ್ಯಾಂಟ್ರೋ ರವಿ ವಿಚಾರದಲ್ಲಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ದೂರುದಾರೆ ಹೇಳಿದ್ದಾರೆ. ಸ್ಯಾಂಟ್ರೋ ರವಿ ನನ್ನನ್ನು ಮೋಸ ಮಾಡಿ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೆ ನನ್ನ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದಾನೆ. ಜೊತೆಗೆ ಸುಳ್ಳು ಪ್ರಕರಣ ದಾಖಲಿಸಿ ನನ್ನನ್ನು ಜೈಲಿಗೆ ಕಳುಹಿಸಿದ್ದಾನೆ. ಆತನಿಗೆ ಶಿಕ್ಷೆಯಾಗುವವರೆಗೆ ನನ್ನ ಹೋರಾಟವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ವಂಚಿಸಿ ಮದುವೆಯಾಗಿದ್ದ ಸ್ಯಾಂಟ್ರೋ ರವಿ: ಆರೋಪಿ ಸ್ಯಾಂಟ್ರೋ ರವಿ, ಫೆಬ್ರವರಿ 2019ರಲ್ಲಿ ಒಂದು ಜಾಹೀರಾತು ನೀಡಿದ್ದ. ಆ ಜಾಹೀರಾತಿನ ಸಂಬಂಧ ನಾನು ಸಂದರ್ಶನಕ್ಕೆ ಹೋಗಿದ್ದೆ. ಬಳಿಕ ನೀವು ಆಯ್ಕೆ ಆಗಿದ್ದೀರಿ ಎಂದು ನನಗೆ ಸಂದೇಶ ಬಂದಿದೆ. ಎರಡು ದಿನಗಳ ಬಳಿಕ ಆತನ ಮನೆಗೆ ಹೋದಾಗ ಜ್ಯೂಸ್ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಮಾಡಿದ್ದ. ಆ ಬಳಿಕ ನಾನು ಬ್ಯಾಚುಲರ್ ಭಯಪಡಬೇಡ ಎಂದು ಹೇಳಿ ವಕೀಲರೊಬ್ಬರ ಸಮ್ಮುಖದಲ್ಲಿ ಮದುವೆಯಾದ ಎಂದು ಯುವತಿ ತಿಳಿಸಿದ್ದಾರೆ.
ಆ ಬಳಿಕ ವರದಕ್ಷಿಣೆ ಕಿರುಕುಳ, ಚಿತ್ರಹಿಂಸೆ ನೀಡುತ್ತಿದ್ದ. ಇದನ್ನೂ ಹೇಗೋ ಸಹಿಸಿಕೊಂಡಿದ್ದೆ. ಆದರೆ, ಕಳೆದ ಅಕ್ಟೋಬರ್ನಲ್ಲಿ ಪರಪುರುಷನೊಂದಿಗೆ ಸಹಕರಿಸು ಎಂದು ಎಂದಾಗ ನಾನು ಒಪ್ಪಲಿಲ್ಲ. ಆ ಸಂದರ್ಭದಲ್ಲಿ ನನ್ನ ಮೇಲೆ ಬೆಂಗಳೂರಿನ ಮನೆಯಲ್ಲಿ ಹಲ್ಲೆ ಮಾಡಿದ. ಬಳಿಕ ನಾನು ಮೈಸೂರಿನ ಅಪ್ಪ ಅಮ್ಮನ ಮನೆಗೆ ಬಂದು ಬಿಟ್ಟೆ ಎಂದು ದೂರುದಾರೆ ತಿಳಿಸಿದರು.
ಕಾಟನ್ ಪೇಟೆ ಪೊಲೀಸರಿಂದ ನನ್ನ ಬಂಧನ: ನವೆಂಬರ್ 26ರಂದು ಬೆಂಗಳೂರಿನ ಪೊಲೀಸರನ್ನು ನನ್ನ ಮನೆಗೆ ಕರೆದುಕೊಂಡು ಬಂದು, ನನ್ನನ್ನು ಮತ್ತು ನನ್ನ ತಂಗಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ನಮ್ಮ ಮೇಲೆ ದರೋಡೆ, ರಾಬರಿ, ಮಾರಣಾಂತಿಕ ಹಲ್ಲೆ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ಹೇಳಿದ್ದರು. ಕಾಟನ್ ಪೇಟೆ ಪೊಲೀಸರ ದೌರ್ಜನ್ಯದ ವಿಡಿಯೋ ನನ್ನ ಬಳಿ ಇದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಂದೆ ತಿಳಿಸುತ್ತೇನೆ ಎಂದು ಸಂತ್ರಸ್ತ ಮಹಿಳೆ ಇದೇ ಹೇಳಿದರು.
ಎಷ್ಟೋ ಹುಡುಗಿಯರ ಜೀವನ ಹಾಳು ಮಾಡಿದ್ದಾನೆ : ಆರೋಪಿ ಸ್ಯಾಂಟ್ರೋ ರವಿ, ಎಷ್ಟೋ ಹುಡುಗಿಯರ ಜೀವನವನ್ನು ಹಾಳು ಮಾಡಿದ್ದಾನೆ. ಇನ್ನು ಮುಂದೆ ನನ್ನಂತಹ ಹುಡುಗಿಯರಿಗೆ ತೊಂದರೆ ಆಗಬಾರದು. ಆ ರೀತಿ ಪೊಲೀಸರು ಶಿಕ್ಷೆ ಕೊಡಬೇಕು ಎಂದು ಹೇಳಿದರು. ಇನ್ನು ಆರೋಪಿ ತಪ್ಪು ಮಾಡಿರುವುದರಿಂದಲೇ ತಲೆ ಮರೆಸಿಕೊಂಡಿದ್ದಾನೆ ಎಂದರು. ನಾನು ಅವರ ಜೊತೆ ಸಂಸಾರ ಮಾಡಿದ್ದು, ಬಾಡಿಗೆ ಮನೆಯಲ್ಲಿ. ಅವನ ಹತ್ತಿರ ಒಂದೇ ಕಾರು ಇತ್ತು. ಆದರೆ, ಈಗ ಬರುತ್ತಿರುವ ಸುದ್ದಿ ನೋಡಿದರೆ, ಆತನಿಗೆ ಎಷ್ಟು ಮದುವೆಯಾಗಿದೆ, ಎಷ್ಟು ಕಾರ್ ಗಳಿವೆ ಹಾಗೂ ಎಷ್ಟು ಸ್ವಂತ ಮನೆಗಳಿವೆ ಎಂದು ಗೊತ್ತಿಲ್ಲ ಎಂದು ದೂರುದಾರೆ ತಿಳಿಸಿದರು.
ಎರಡು ಬಾರಿ ಅಬಾರ್ಷನ್ ಮಾಡಿಸಿದ್ದ : ನಾನು ಎರಡು ಸಾರಿ ಗರ್ಭಿಣಿಯಾಗಿದ್ದೆ. ಆದರೆ, ಈಗಲೇ ಮಕ್ಕಳು ಬೇಡ ಎಂದು ಎರಡು ಬಾರಿಯೂ ಅಬಾರ್ಷನ್ ಮಾಡಿಸಿದ್ದ. ದುಡ್ಡುಕೊಟ್ಟರೆ ಯಾವ ಸರ್ಟಿಫಿಕೇಟ್ ಬೇಕಾದರೂ ಮಾಡಿಸಿಕೊಂಡು ಬರುತ್ತಿದ್ದ. ನಾನು ಯಾವುದೇ ತಪ್ಪು ಮಾಡದೇ 23 ದಿನ ಜೈಲಿನಲ್ಲಿದ್ದೆ. ಈತನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ನನಗಾದ ತೊಂದರೆಯ ಬಗ್ಗೆ ದೂರು ನೀಡಿದ್ದೇನೆ. ಈ ಬಗ್ಗೆ ದೂರು ದಾಖಲಾಗಿ ಎಫ್ ಐಆರ್ ಕೂಡಾ ಆಗಿದ್ದು, ನಿನ್ನೆ ಪೊಲೀಸರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದ್ದೇನೆ. ಆತ ಎಷ್ಟೇ ಪ್ರಭಾವಿ ಆದರೂ, ಕಾನೂನಿನ ಮುಂದೆ ಎಲ್ಲರೂ ಒಂದೇ. ಈತ ತಪ್ಪು ಮಾಡಿದ್ದಾನೆ ಶಿಕ್ಷೆ ಖಚಿತ ಎಂದು ದೂರುದಾರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಕೆಲಸದ ಆಮಿಷಯೊಡ್ಡಿ ಯುವತಿ ಮೇಲೆ ಅತ್ಯಾಚಾರ.. ಆರೋಪಿಗೆ ಬಿಜೆಪಿ ಸಚಿವರ ಸಂಪರ್ಕ ಇದೆ ಎಂದ ಹೆಚ್ಡಿಕೆ