ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗುವ ಅರ್ಜುನ ಆನೆಗೆ ಲಾರಿ ಡಿಕ್ಕಿ ಹೊಡೆದು ಕಾಲಿಗೆ ಗಾಯವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದ್ರೋಣ ಸಾವಿನ ನಂತರ ಮತ್ತೊಂದು ಶಾಕ್... ಅಂಬಾರಿ ಹೊರುವ ಅರ್ಜುನನಿಗೆ ಲಾರಿ ಡಿಕ್ಕಿ, ಕಾಲಿಗೆ ಗಾಯ - ದಸರಾ ಅಂಬಾರಿ
ದಸರಾ ಜಂಬು ಸವಾರಿಯಲ್ಲಿ ಪ್ರಮುಖವಾಗಿ ಆನೆಗಳ ಸಾರಥ್ಯ ವಹಿಸುವ ಅರ್ಜುನ ಆನೆಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾಲಿಗೆ ಗಾಯವಾಗಿದೆ..
ನಾಗರಹೊಳೆ(ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಬಳ್ಳೆ ಸಾಕಾನೆ ಶಿಬಿರ ಸಮೀಪ ಈ ಘಟನೆ ನಡೆದಿದೆ. ಕಳೆದ ವಾರ ಕಾಡಿಗೆ ಮೇಯಲು ಹೋಗಿ ಸಂಜೆ 5 ಗಂಟೆಗೆ ರಸ್ತೆ ಮೂಲಕ ಅರ್ಜುನ ಶಿಬಿರಕ್ಕೆ ಬರುವಾಗ ಕೇರಳದಿಂದ ಮೈಸೂರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಂದಿನಿಂದ ಆನೆಯನ್ನು ಕಾಡಿಗೆ ಮೇಯಲು ಬಿಡದೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕೆ.ಗುಡಿ ಆನೆ ಶಿಬಿರದಲ್ಲಿ ರಾಜೇಂದ್ರ ಆನೆಗೂ ಕೂಡ ಆರೋಗ್ಯದಲ್ಲಿ ಏರುಪೇರಾಗಿ ಆಹಾರ ಸೇವಿಸಲು ಕಷ್ಟಪಡುತ್ತಿದೆ. ಈ ಆನೆಯು ಕೂಡ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು. ಆದರೆ ಮಾವುತನನ್ನು ಸೊಂಡಿಲಿನಿಂದ ಹೊಡೆದು ಕೊಂದಿದ್ದಕ್ಕೆ ಎರಡು ವರ್ಷಗಳಿಂದ ದಸರಾ ಮಹೋತ್ಸವಕ್ಕೆ ಕರೆತಂದಿಲ್ಲ. ಎರಡು ದಿನಗಳ ಹಿಂದೆ ಜ್ಯೂನಿಯರ್ ದ್ರೋಣ ಆನೆ ನಿಧನ ಹೊಂದಿದ ಬಳಿಕ ಸಾಕಾನೆಗಳ ಮೇಲೆ ಅಧಿಕಾರಿಗಳು ವಿಶೇಷ ಕಾಳಜಿಗೆ ಮುಂದಾಗಿದ್ದಾರೆ.