ಮೈಸೂರು: ನಿಮ್ಮ ಸುತ್ತಲೂ ಭಯೋತ್ಪಾದಕರು ಇದ್ದಾರೆ. ನಿಮ್ಮದೇ ಶಾಸಕರ ಮನೆಗೆ ಬೆಂಕಿ ಬಿದ್ದಿತ್ತು. ಅವರಿಗೆ ನಿಮ್ಮ ಬೆಂಬಲಿಗರೇ ಜಾಮೀನು ಕೊಡಿಸಿದ್ದಾರೆ. ಹೀಗಾಗಿ, ನಿಮಗೆ ದೃಷ್ಟಿ ದೋಷವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಎಸ್ಎಸ್ ನೂರಾರು ವಿದ್ಯಾಸಂಸ್ಥೆಗಳನ್ನು ಕಟ್ಟಿ, ಶುಲ್ಕವಿಲ್ಲದೇ ಕೆಲವು ಕಡೆ ಶಿಕ್ಷಣವನ್ನು ಕೊಡುತ್ತಿದೆ. ನಿಮ್ಮದೇ ಶಾಸಕರ ಮನೆಗೆ ಬೆಂಕಿ ಬಿತ್ತು. ಅವರಿಗೆ ನಿಮ್ಮ ಬೆಂಬಲಿಗರೇ ಜಾಮೀನು ಕೊಡಿಸಿದ್ದಾರೆ. ಹೀಗಾಗಿ, ನಿಮಗೆ ದೃಷ್ಟಿ ದೋಷವಿದೆ. ಅದಕ್ಕಾಗಿ ನಿಮಗೆ ಚಿಕಿತ್ಸೆಯ ಅಗತ್ಯವಿದೆ. ನಿಮಗೆ ವಯಸ್ಸಾಗುತ್ತಾ ಬರುತ್ತಿದೆ. ಈಗಲಾದರೂ ಸುಳ್ಳು ಹೇಳುವುದನ್ನು ಬಿಡಿ. ಆರ್ಎಸ್ಎಸ್ಗೆ ನಿಮ್ಮ ಸರ್ಟಿಫಿಕೇಟ್ನ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಮುಂದೊಂದು ದಿನ ಆರ್ಎಸ್ಎಸ್ನ್ನು ಪ್ರಶಂಸಿಸುವ ದಿನ ಬರುತ್ತದೆ..ಆರ್ಎಸ್ಎಸ್ ಅನ್ನು ದೇಶದ ಎಲ್ಲಾ ಜನರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಆರ್ಎಸ್ಎಸ್ ದೇಶಭಕ್ತ ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರಿಗೆ ತಪ್ಪಿನ ಅರಿವಾಗಿ ಅವರೇ ಆರ್ಎಸ್ಎಸ್ಅನ್ನು ಪ್ರಶಂಸಿಸುವ ದಿನ ಬರುತ್ತದೆ ಎಂದು ಸಿದ್ಧರಾಮಯ್ಯ ಟ್ವೀಟ್ಗೆ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
ರಾಜ್ಯಸಭೆಯಲ್ಲಿ ನಮ್ಮ ಮೂರನೇ ಅಭ್ಯರ್ಥಿಯೂ ಗೆಲ್ಲುತ್ತಾರೆ:ರಾಜ್ಯಸಭೆಯಲ್ಲಿ ನಮ್ಮ ಮೂರನೇ ಅಭ್ಯರ್ಥಿಯೂ ಗೆಲ್ಲುತ್ತಾರೆ. ಚುನಾವಣಾ ರಣ ನೀತಿಯನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಬೇರೆ ಬೇರೆ ಪಕ್ಷಗಳಲ್ಲಿಯೂ ಕೂಡ ಮೋದಿ ಅವರನ್ನು ಇಷ್ಟಪಡುವವರು ಇದ್ದಾರೆ. ಎರಡು ಪಕ್ಷಗಳ ಬಹಿರಂಗ ಬಿನ್ನಾಭಿಪ್ರಾಯ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತದೆ. ಜೆಡಿಎಸ್ನಲ್ಲಿ 33 ವೋಟ್ ಇದೆ. ಈ ವೋಟುಗಳು ಅವರಿಗೆ ಬೀಳುವ ವಿಶ್ವಾಸ ಇಲ್ಲ. ನಮ್ಮ ಎರಡು ಅಭ್ಯರ್ಥಿಗಳಿಗೂ ಕೂಡ ತಲಾ 45 ವೋಟ್ ಹಾಕಿದ ಮೇಲೆ ಇನ್ನೂ 32 ವೋಟ್ ಉಳಿಯುತ್ತವೆ. ಚುನಾವಣಾ ರಣತಂತ್ರದ ಮೂಲಕ ಹೇಗೆ ಗೆಲ್ಲುತ್ತೇವೆ ಅನ್ನೋದು 10ರ ಬಳಿಕ ಗೊತ್ತಾಗಲಿದೆ ಎಂದು ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕ್ರಾಂತಿಕಾರಿ ಹೆಜ್ಜೆಯಾಗಿದೆ:ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲ ರಂಗಗಳಲ್ಲಿಯೂ ಗಣನೀಯ ಅಭಿವೃದ್ಧಿ ಆಗಿದೆ. ಮಾತೃಭಾಷೆಯಲ್ಲಿ ಶಿಕ್ಷಣವನ್ನ ಕಡ್ಡಾಯಗೊಳಿಸಲಾಗಿದೆ. ಇದು ಭವಿಷ್ಯದಲ್ಲಿ ಕ್ರಾಂತಿಯನ್ನು ಮಾಡಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯೂ ಒಂದು ದೊಡ್ಡ ಕ್ರಾಂತಿಕಾರಿ ಹೆಜ್ಜೆಯಾಗಿದೆ. ದೇಶದ ಎಲ್ಲ ರಾಜ್ಯಗಳನ್ನು ಸಮಾನತೆಯಿಂದ ನೋಡುವ ಸಲುವಾಗಿ ಜಮ್ಮು- ಕಾಶ್ಮೀರಕ್ಕೆ ಇದ್ದ 371ನೇ ವಿಧಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ.
ಭಾರತ ವಿಕೇಂದ್ರಿತ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಭಾರತೀಯರನ್ನು ಗೌರವದಿಂದ ನೋಡುವ ವಾತಾವರಣ ನಿರ್ಮಾಣವಾಗಿದೆ. ಜಾಗತಿಕ ನಾಯಕರ ಸಾಲಿಗೆ ಭಾರತದ ಪ್ರಧಾನಿ ಬಂದು ನಿಂತಿದ್ದಾರೆ. ಕಟ್ಟಕಡೆಯ ಮನುಷ್ಯನಿಗೂ ಸಹ ಲಾಭ ಸಿಗುವಂತೆ ಮಾಡಲಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.
ಓದಿ:ನವ ಸಂಕಲ್ಪ ಶಿಬಿರಕ್ಕೆ ಕೆಲ ಅತೃಪ್ತರ ಗೈರು.. ರಾಜ್ಯ ನಾಯಕರ ಸಂಘಟನೆ ಯತ್ನಕ್ಕೆ ಆಗುತ್ತಾ ಹಿನ್ನಡೆ?!