ಮೈಸೂರು :ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಸ್ಯೆ ಹೊಸದಲ್ಲ. ಬಹಳ ಜನ ಹಾವು-ಚೇಳಿನ ರೀತಿ ತೊಂದರೆ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಓದಿ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಸಾವು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಜೆಎಸ್ಎಸ್ ಬಡಾವಣೆಯಲ್ಲಿ ಮಹಾಸಭಾದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಎಲ್ಲೀವರೆಗೆ ನಾಡಿನ ಜನರ ಆಶೀರ್ವಾದ ಇರುತ್ತೋ, ನಾಡಿನ ಸ್ವಾಮೀಜಿಗಳ ಆಶೀರ್ವಾದ ಇರುತ್ತೋ ಅಲ್ಲಿಯವರೆಗೆ ಜನರ ಸೇವೆ ಮಾಡುತ್ತಾರೆ ಎಂದರು.
ಪಂಚಮಶಾಲಿ, ಕುರುಬ, ವಾಲ್ಮೀಕಿ ಹೀಗೆ ಹಲವು ಹೋರಾಟಗಳು ನಡೆಯುತ್ತಿವೆ. ನುಡಿದಂತೆ ನಡೆದ ನಾಯಕ ಯಡಿಯೂರಪ್ಪ ಅವರು, ಕನಕಪೀಠ, ವಾಲ್ಮೀಕಿ ಜಯಂತಿ ಘೋಷಣೆ ಮಾಡಿದ್ದಾರೆ. ಹಿಂದುಳಿದ, ದಲಿತ ವರ್ಗಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡುವ ಪ್ರಯತ್ನ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಎಲ್ಲರಿಗೂ ನ್ಯಾಯ ದೊರಕಿಸಲಾಗುವುದು ಎಂದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೋರಾಟಗಳ ನಾಯಕತ್ವ ವಹಿಸಬೇಕು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾರ್ಗದರ್ಶನ ಮಾಡಬೇಕು. ಕಾಲು ಜಾರಿದರೆ ಅನಾಹುತ ಆಗಲ್ಲ.
ನಾಲಿಗೆ ಜಾರಿದರೆ ಆಗುವ ಡ್ಯಾಮೇಜ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಆಡುವ ಒಂದೊಂದು ಮಾತು ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನನಗೆ ರಾಜಕೀಯ ಜನ್ಮ ನೀಡಿದ್ದು ವರುಣಾ ಕ್ಷೇತ್ರ, ಜನ್ಮ ನೀಡಿದರು ಸಹ ನಾನು ಇಲ್ಲಿ ಏನು ಕಿತ್ತು ಹಾಕಿಲ್ಲ. ಆದರೂ ಇಲ್ಲಿಯ ಜನ ಪ್ರೀತಿ ತೋರಿ ರಾಜಕೀಯ ಶಕ್ತಿ ತುಂಬಿದ್ದಾರೆ. ಅದೇ ಶಕ್ತಿಯಿಂದ ಶಿರಾ ಹಾಗೂ ಕೆ.ಆರ್.ಪೇಟೆಯಲ್ಲಿ ನಾನು ಕೆಲಸ ಮಾಡಲು ಅವಕಾಶ ಆಯ್ತು.
ನಾನು ರಾಜಕೀಯದಲ್ಲಿ ಎಷ್ಟು ದಿನ ಇರ್ತೇನೋ ಗೊತ್ತಿಲ್ಲ. ಆದರೆ, ನಾನು ಇರುವವರೆಗೂ ನಮ್ಮ ಮನೆ ಬಳಿ ಬಂದವರ ಕಷ್ಟ ಕೇಳುತ್ತೇನೆ. ಇದನ್ನ ನನ್ನ ತಂದೆ ನನಗೆ ಹೇಳಿಕೊಟ್ಟಿದ್ದಾರೆ ಎಂದರು.
ಮೈಸೂರಿಗೆ ಟೆಕ್ಸ್‌ಟೈಲ್ ಪಾರ್ಕ್ ತನ್ನಿ, ಫಿಲ್ಮ್ ಸಿಟಿಯನ್ನ ಮೈಸೂರಿನಲ್ಲೇ ಸ್ಥಾಪಿಸಿ. ಇಡೀ ರಾಜ್ಯದಲ್ಲಿ ಮೈಸೂರಿನಂತಹ ಜಿಲ್ಲೆ ಇಲ್ಲ. ಹಾಗಾಗಿ, ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿ ಜಿಲ್ಲಾ ಉಸ್ತುವಾರಿ ಸೋಮಶೇಖರ್ ಅವರಿಗೆ ಮನವಿ ಮಾಡಿದರು.