ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ಜನರು ತಮ್ಮ ಹಕ್ಕನ್ನು ಚಲಾಯಿಸಿದ್ಧಾರೆ. ವಿಶೇಷ ಎಂದರೆ ಮದುವೆ ಮುಗಿದ ನಂತರ ವಧು-ವರರ ತಮ್ಮ ಪರಿವಾರದೊಂದಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಈ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಕೋಲಾರದಲ್ಲಿ ವಧು ವರರಿಂದ ಮತದಾನ: ಕೋಲಾರದಲ್ಲಿಯೂ ಸಹ ವಧು ವರ ಇಬ್ಬರೂ ಮದುವೆ ಮುಗಿಸಿಕೊಂಡು ತಮ್ಮ ಹಕ್ಕು ಚಲಾಯಿಸಿದ ಪ್ರಸಂಗ ಕಂಡು ಬಂತು. ಮದುವೆ ಮುಗಿಸಿಕೊಂಡು ನೇರವಾಗಿ ವಿನೋಬ್ ನಗರ ಮತಗಟ್ಟೆಗೆ ಬಂದ ವಧು ವರರು ತಮ್ಮ ಮತದಾನ ಮಾಡಿದರು. ನವದಂಪಿತ ಮಂಜುನಾಥ್ ಹಾಗೂ ರೂಪಿಣಿ ಮತಗಟ್ಟೆ ಸಂಖ್ಯೆ 240 ರಲ್ಲಿ ಮತ ಚಲಾಯಿಸಿ ಇತರರಿಗೆ ಮಾದರಿಯಾದರು.
ಚಿಕ್ಕಮಗಳೂರಿನಲ್ಲಿ ಮದುವೆಗೂ ಮುನ್ನ ಮತದಾನ ಮಾಡಿದ ವಧು:ಚಿಕ್ಕಮಗಳೂರಿನಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಇಲ್ಲಿನ 165ನೇ ಮತಗಟ್ಟೆ ಕೇಂದ್ರದಲ್ಲಿ ಮಧುಮಗಳೊಬ್ಬರು ಹಕ್ಕು ಚಲಾಯಿಸಿದರು. ಮದುವೆ ಮನೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿದ ಆಕೆ ಮದುವೆ ದಿರಿಸಿನಲ್ಲೇ ತಮ್ಮ ವೋಟಿಂಗ್ ಮಾಡಿದರು. ಈ ಮೂಲಕ ಮದುವೆ ಸಂಭ್ರಮದಲ್ಲೂ ಕರ್ತವ್ಯಪ್ರಜ್ಞೆ ಮೆರೆದು ಮಾದರಿಯಾದರು.