ಕರ್ನಾಟಕ

karnataka

ETV Bharat / state

ಎಪಿಎಂಸಿ ಕಾಯ್ದೆ ಉಪಯೋಗ ತಿಳಿಸಲು ಜ. 5ರಿಂದ ರಾಜ್ಯಾದ್ಯಂತ ಪ್ರವಾಸ : ಸಚಿವ ಸೋಮಶೇಖರ್

ರಾಜ್ಯದಲ್ಲಿ ಸಹಕಾರ ಇಲಾಖೆ ಮೂಲಕ ಜನರಿಗೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತದ ಅಡಿ ಈಗಾಗಲೇ 600 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗೆ ಈ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿದ ಮೊದಲ ರಾಜ್ಯ ಕರ್ನಾಟಕ..

BJP Working Committee Meeting
ಬಿಜೆಪಿ ಕಾರ್ಯಕಾರಣಿ ಸಭೆ

By

Published : Dec 16, 2020, 4:16 PM IST

Updated : Dec 16, 2020, 5:14 PM IST

ಮೈಸೂರು :ಕೇಂದ್ರ ಸರ್ಕಾರದ ಜನೌಷಧಿ ಸೇರಿದಂತೆ ಎಪಿಎಂಸಿ ಕಾಯ್ದೆಯಿಂದ ಜನತೆಗಾಗುವ ಉಪಯೋಗಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ಕಾರ್ಯಕ್ರಮವನ್ನು ಜನವರಿ 5ರಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಬಿಜೆಪಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ

ಹಿಂದುಳಿದ ವರ್ಗಗಳ ಬಿಜೆಪಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ಕಂದಾಯ ವಿಭಾಗಗಳ 30 ಜಿಲ್ಲೆಗಳಲ್ಲೂ ಸಹ ಪ್ರವಾಸ ಮಾಡಿ ಕೇಂದ್ರದ ಯೋಜನೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಉಪಯೋಗಗಳ ಅರಿವು ಮೂಡಿಸುತ್ತೇವೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯನ್ನು ಗ್ರಾಮೀಣ ಪ್ರದೇಶಗಳ ಜನರಿಗೂ ತಲುಪಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಇದನ್ನು ಸಹಕಾರ ಇಲಾಖೆಯ ಅಧೀನದಲ್ಲಿ ಬರುವ ಮಾರ್ಕೇಟಿಂಗ್ ಫೆಡರೇಶನ್ ಮೂಲಕ ಕೇಂದ್ರಗಳನ್ನು ತೆರೆದು ಜನರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು ತಮಗೆ ಬಂದ ಪತ್ರದ ಬಗ್ಗೆ ಉಲ್ಲೇಖಿಸಿದ್ದು, 'ವ್ಯಕ್ತಿಯೊಬ್ಬರು ತಮ್ಮ ತಂದೆಗೆ ಬಿಪಿ, ಶುಗರ್‌ಗಾಗಿ ತಿಂಗಳಿಗೆ 2 ರಿಂದ 3 ಸಾವಿರ ರೂ. ವ್ಯಯಿಸಬೇಕಾಗಿತ್ತು. ಆದರೆ, ಜನೌಷಧಿ ಬಂದ ಮೇಲೆ ಕೇವಲ 250 ರೂಪಾಯಿಗೆ ಎಲ್ಲವೂ ಸಿಗುತ್ತಿದೆ'ಎಂದು ಪತ್ರದಲ್ಲಿ ಬರೆದಿದ್ದಾಗಿ ಡಿವಿಎಸ್ ಅವರು ಮಾಹಿತಿ ನೀಡಿದ್ದರು ಎಂದು ಉಲ್ಲೇಖಿಸಿದರು.

ಆತ್ಮನಿರ್ಭರ ಅಡಿ ಹೆಚ್ಚುವರಿ ₹600 ಕೋಟಿಗೆ ಕೇಂದ್ರಕ್ಕೆ ಪ್ರಸ್ತಾವನೆ : ಆತ್ಮನಿರ್ಭರ ಯೋಜನೆಯಡಿ ಕರ್ನಾಟಕಕ್ಕೆ ₹4,750 ಕೋಟಿ ಅನುದಾನ ಸಿಗುತ್ತಿದೆ. ಇದರಲ್ಲಿ ಶೂನ್ಯ ಬಡ್ಡಿದರ ಹಾಗೂ ಶೇ.3ರ ಬಡ್ಡಿದರದಲ್ಲಿ 2 ರಿಂದ 3 ಲಕ್ಷ ರೂಪಾಯಿವರೆಗೆ ಮೀನುಗಾರಿಕೆ ಹಾಗೂ ಹೈನುಗಾರಿಕೆಗೆ ಸಾಲ ಕೊಡಲಾಗುತ್ತಿದೆ. ಜೊತೆಗೆ ಅರ್ಥಿಕವಾಗಿ ಬಲ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ.

ರಾಜ್ಯದಲ್ಲಿ ಸಹಕಾರ ಇಲಾಖೆ ಮೂಲಕ ಜನರಿಗೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತದ ಅಡಿ ಈಗಾಗಲೇ 600 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗೆ ಈ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಸಚಿವರು ತಿಳಿಸಿದರು.

ರೈತರಿಗೆ ನನ್ನ ಬೆಳೆ, ನನ್ನ ಬೆಲೆ ಅಧಿಕಾರ :ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಸಾಕಷ್ಟು ಅನುಕೂಲವಿದೆ. ಇದು ಬಂದಿದ್ದರಿಂದ ರೈತ ತನ್ನ ಉತ್ಪಾದನೆಯನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು. ನನ್ನ ಬೆಳೆ, ನನ್ನ ಬೆಲೆ ಎಂದು ರೈತನೇ ನಿರ್ಧರಿಸುತ್ತಾನೆ. ಅಷ್ಟು ಸ್ವಾತ್ರಂತ್ರ್ಯವನ್ನು ರೈತರಿಗೆ ಸಿಗುವಂತೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಎಂದು ತಿಳಿಸಿದರು.

ಕನಿಷ್ಠ ಬೆಂಬಲ ಬೆಲೆ ತೆಗೆಯಲ್ಲ, ಎಪಿಎಂಸಿ ಮುಚ್ಚಲ್ಲ :ಬೆಂಬಲ ಬೆಲೆ ಕೊಟ್ಟೇ ಕೊಡುತ್ತೇವೆ. ರೈತರ ಸಂಕಷ್ಟ ಕಾಲದಲ್ಲಿ ನಮ್ಮ ಸರ್ಕಾರ ನೆರವಾಗುತ್ತದೆ. ಕನಿಷ್ಠ ಬೆಂಬಲ ಬೆಲೆಯನ್ನು ತೆಗೆಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅನೇಕ ಬಾರಿ ರೈತರ ನೆರವಿಗೆ ಬಂದಿದ್ದೇವೆ.

ಎಪಿಎಂಸಿಯನ್ನು ಮುಚ್ಚುವ ಪ್ರಸ್ತಾವವೂ ನಮ್ಮ ಸರ್ಕಾರದ ಮುಂದೆ ಇಲ್ಲ. ರೈತರ ಪರ ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿದೆ. ಇದು ವಿರೋಧ ಪಕ್ಷಗಳ ಸುಳ್ಳು ಪ್ರಚಾರ. ಅವರ ರಾಜಕೀಯ ದುರುದ್ದೇಶಕ್ಕೋಸ್ಕರ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅರಸು ಅವರಿಗೆ ಅರಸು ಅವರೇ ಸಾಟಿ :ಹಿಂದುಳಿದ ವರ್ಗಗಳ ಬಿಜೆಪಿ ರಾಜ್ಯ ಮೋರ್ಚಾ ಅಧ್ಯಕ್ಷ ನೆ ಲ ನರೇಂದ್ರ ಬಾಬು ಅವರು, ಉತ್ತಮ ಸಂಘಟನಾತ್ಮಕ ಕಾರ್ಯಗಳನ್ನು ಮಾಡಿತ್ತಿದ್ದಾರೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಪರಿಶ್ರಮದಿಂದ ಬೆಳೆದು ಬಂದವರು.

ಅನೇಕರನ್ನು ಬೆಳೆಸಿದ್ದಲ್ಲದೆ, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ದುಡಿದವರು. ರಾಜ್ಯದಲ್ಲಿ ದೇವರಾಜು ಅರಸು ಅವರು ಹಿಂದುಳಿದ ವರ್ಗಗಳ ನಾಯಕರಾಗಿ ಅನೇಕ ಜನಪರ ಕಾರ್ಯಗಳನ್ನು ಜಾರಿಗೆ ತಂದರು. ಇಂದು ಅನೇಕ ನಾಯಕರನ್ನು ಅವರಿಗೆ ಹೋಲಿಕೆ ಮಾಡಲು ಹೋಗುತ್ತಾರೆ. ಆದರೆ, ಅರಸು ಅವರಿಗೆ ಅವರೇ ಸಾಟಿ ಎಂದು ತಿಳಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಆದಾಯ :ರಾಷ್ಟ್ರಿಯ ಹಿಂದುಳಿದ ವರ್ಗಗಳ ಬಿಜೆಪಿ ಘಟಕದ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯ ಉಪಯೋಗಗಳ ಬಗ್ಗೆ ಸಹಕಾರ ಸಚಿವ ಸೋಮಶೇಖರ್ ಅವರು ವಿಸ್ತಾರ ಹಾಗೂ ಸರಳವಾಗಿ ತಿಳಿಸಿದ್ದಾರೆ. ಈ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಉತ್ತಮ ಆದಾಯ ಸಿಗುತ್ತಿದೆ.

ರೈತ ತನ್ನ ಬೆಳೆಯನ್ನು ಎಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು. ಮಾರುಕಟ್ಟೆಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಇನ್ನೂ ಅನೇಕ ಉಪಯೋಗಗಳು ಇದರಲ್ಲಿವೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತರ ಗೆಲುವು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಿಜೆಪಿಯ ಗ್ರಾಮ ಸ್ವರಾಜ್ಯ ಕಾರ್ಯಕ್ರಮವು ರಾಜ್ಯಾದ್ಯಂತ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮದು ಕೇಡರ್ ಆಧಾರಿತ ಪಕ್ಷ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಬಿಜೆಪಿ ಸರ್ವವ್ಯಾಪಿ ಪಕ್ಷವಾಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದಂತಹ ಹಿರಿಯ ನಾಯಕ ಎಸ್ ಟಿ ಸೋಮಶೇಖರ್ ಅವರೂ ಸಹ ನಮ್ಮ ಪಕ್ಷ ಒಪ್ಪಿ ಬಂದಿದ್ದಾರೆಂದ್ರೆ, ನಮ್ಮ ಪಕ್ಷವು ಎಲ್ಲರಿಗೂ ತಲುಪುತ್ತಿದೆ ಎಂಬುದಕ್ಕೆ ನಿದರ್ಶನ ಎಂದು ಕಟೀಲ್ ತಿಳಿಸಿದರು.

ಎಲ್ಲರಲ್ಲೂ ನಾಯಕತ್ವ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಮೋರ್ಚಾಗಳನ್ನು ಮಾಡಿ ಪ್ರತಿ ಕಾರ್ಯಕರ್ತನಿಗೆ ಜವಾಬ್ದಾರಿ ನೀಡಿ, ಬೆಳೆಸಿದೆ. ಕಾಂಗ್ರೆಸ್‌ನಲ್ಲಿ ಇಂದಿರಾಗಾಂಧಿ ಕಾಲದಲ್ಲಿ ಆ ಪಕ್ಷದಡಿ ಲೈಟ್ ಕಂಬವನ್ನು ನಿಲ್ಲಿಸಿದರೂ ಗೆಲ್ಲುತ್ತಿತ್ತು ಎಂಬ ಮಾತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರ ಸಹಿತ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತಿದೆ ಎಂದು ತಿಳಿಸಿದರು.

ನಮ್ಮದು ಕೃಷಿ ಆಧಾರಿತ ದೇಶ. ಈ ಹಿಂದೆ ರೈತನ ಬೆಳೆಗೆ ಬೆಲೆ ಸಿಗುತ್ತಿರಲಿಲ್ಲ. ಆದರೆ, ಕಾಯ್ದೆ ತಿದ್ದುಪಡಿಯಿಂದ ರೈತನಿಗೆ ನ್ಯಾಯ ಸಿಕ್ಕಿದೆ. ಆತ ತನ್ನ ಉತ್ಪನ್ನಕ್ಕೆ ಈಗ ತಾನೇ ಬೆಲೆ ನಿರ್ಧರಿಸುವ ಕಾಲ ಬಂದಿದೆ.

ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ಮುಕ್ತವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಎಂದು ತಿಳಿಸಿದರು.

ನಿಷ್ಠೆಯಿಂದ ದುಡಿದ್ರೆ ಕಟ್ಟಕಡೆಯ ಕಾರ್ಯಕರ್ತ ಸಹ ಉನ್ನತ ಹುದ್ದೆಗೇರುತ್ತಾರೆ ಎಂಬುದಕ್ಕೆ ಬಿಜೆಪಿ ಸಾಕ್ಷಿ. ಇಲ್ಲಿ ಹಿಂದುಳಿದ ವರ್ಗದವರಿಗೂ ಉತ್ತಮ ಸ್ಥಾನ ಸಿಗುತ್ತದೆ ಎಂಬುದಕ್ಕೆ ಸಂಸದ ಸ್ಥಾನಕ್ಕೆ ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡಿದ್ದೇ ಸಾಕ್ಷಿ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ರಾಮದಾಸ್, ನಾಗೇಂದ್ರ, ಹರ್ಷವರ್ಧನ್, ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ರಾಜ್ಯ ಒಬಿಸಿ ಘಟಕದ ಅಧ್ಯಕ್ಷರಾದ ನೆ ಲ ನರೇಂದ್ರ ಬಾಬು, ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ ಹಾಗೂ ಗ್ರಾಮಾಂತರ ಘಟಕದ ಅಧ್ಯಕ್ಷರಾದ ಮಂಗಳಾ ಸೋಮಶೇಖರ್ ಸೇರಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರು ಉಪಸ್ಥಿತರಿದ್ದರು.

Last Updated : Dec 16, 2020, 5:14 PM IST

ABOUT THE AUTHOR

...view details