ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ಮೈಸೂರು:ನಮ್ಮ ರಾಷ್ಟ್ರೀಯ ಅಧ್ಯಕ್ಷರು ನನಗೆ ರಾಜಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನ ನೀಡಿ ಟಿ20 ಮ್ಯಾಚ್ ಆಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಕ್ರಿಕೆಟ್ನಂತೆ ರಾಜಕೀಯದಲ್ಲೂ ಟೀಂ ವರ್ಕ್ ಇರಬೇಕು ಎಂದು ಹೇಳುತ್ತಾರೆ. ನಾವು ಒಂದು ತಂಡವಾಗಿ ಕೆಲಸ ಮಾಡಿದರೆ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದರು.
ಬರುವ ದಿನಗಳಲ್ಲಿ ನನ್ನ ಟಿ20 ಮ್ಯಾಚ್ ಅನ್ನು ನೀವೇ ನೋಡಲಿದ್ದೀರಿ. ರಾಜಕೀಯವಾಗಿ ನನ್ನನ್ನು ಗುರುತಿಸಿದ್ದು ವರುಣ ಕ್ಷೇತ್ರ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ. ರಾಜ್ಯಾಧ್ಯಕ್ಷನಾಗಿ ಇವತ್ತು ಮತ್ತು ನಾಳೆ ಮಂಡ್ಯ ಮತ್ತು ಮೈಸೂರು ಜಿಲ್ಲೆ ಪ್ರವಾಸ ಮಾಡುತ್ತಿದ್ದೇನೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಉತ್ಸಾಹದಿಂದ ಬಂದಿದ್ದಾರೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರಾಗಿ ನೇಮಕವಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಬಿ.ವೈ ವಿಜಯೇಂದ್ರ ಅವರನ್ನು ಮೈಸೂರು-ಬೆಂಗಳೂರು ರಸ್ತೆಯ ಟೋಲ್ಗೇಟ್ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ ಕೋರಿದರು. ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ, ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎನ್.ಮಹೇಶ್ ಇದ್ದರು.
ಎಂಪಿ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಸ್ಥಾನ ಗೆಲ್ಲುವುದು ನಮ್ಮ ಗುರಿ:ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಂಡ್ಯದಲ್ಲಿ ಮಾತನಾಡಿ, ಕೆ ಆರ್ ಪೇಟೆ ನಮ್ಮ ತಂದೆಯವರಿಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಈ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ನಾರಾಯಣ ಗೌಡರು ಗೆಲ್ಲುವುದರ ಮೂಲಕ ದಾಖಲೆಯನ್ನು ನಿರ್ಮಾಣ ಮಾಡಿದ್ದೇವೆ. ಕಳೆದ ಚುನಾವಣೆಯಲ್ಲಿ ಕೆಲವು ಬದಲಾವಣೆಗಳು ಆಗಿವೆ. ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ನಮ್ಮ ನಿರೀಕ್ಷೆಗೆ ತಕ್ಕ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ನಮ್ಮ ಮುಂದೆ ಎರಡು ಗುರಿಗಳಿವೆ, ಒಂದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸುವುದು ಎಂದರು.
ಎರಡಯದಾಗಿ, ಕರ್ನಾಟಕ ದಕ್ಷಿಣ ಭಾರತದ ಬಿಜೆಪಿಯ ಭದ್ರಕೋಟೆಯಾಗಿ ಪರಿವರ್ತನೆಯಾಗಬೇಕು ಮತ್ತು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು, ಸ್ಪಷ್ಟ ಬಹುಮತವನ್ನು ಪಡೆಯುವುದಾಗಿದೆ. ಈ ಮೂಲಕ ಬಿಜೆಪಿ ನೇತೃತ್ವದಲ್ಲಿ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ, ಮಂಡ್ಯಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಬಿಜೆಪಿ ಕಾರ್ಯಕರ್ತರು ನಾಗಮಂಗಲ ಹಾಗೂ ಕೆ ಆರ್ ಪೇಟೆ ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಬೃಹತ್ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು.
ಇದನ್ನೂ ಓದಿ:ಕುಮಾರಣ್ಣ ಬುದ್ಧಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು