ಮೈಸೂರು:ಕರ್ನಾಟಕ ಕಂಡ ಮುತ್ಸದ್ಧಿ ರಾಜಕಾರಣಿ, ದಲಿತ ಮುಖಂಡರಾಗಿರುವ ಚಾಮರಾಜನಗರ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ದೀರ್ಘ ಕಾಲದ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ನಗರದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನಕ್ಕೆ 50 ವರ್ಷ ಆಗುತ್ತಿದೆ. ಇನ್ನು ಒಂದೂವರೆ ವರ್ಷಕ್ಕೆ ಸಂಸದ ಅವಧಿ ಮುಕ್ತಾಯವಾಗುತ್ತದೆ. ಈಗ ನನ್ನ ಆರೋಗ್ಯ ಸರಿಯಿಲ್ಲ. ಹಾಗಾಗಿ ಅಲ್ಲಿಗೆ ನಿವೃತ್ತಿ ಆಗುತ್ತೇನೆ ಎಂದು ಭಾವುಕರಾಗಿ ಹೇಳಿದರು.
ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಶ್ರೀನಿವಾಸ್ ಪ್ರಸಾದ್ 1977ರಲ್ಲಿ ಜನತಾ ಪಕ್ಷದಿಂದ ರಾಜಕೀಯ ಪ್ರವೇಶಿಸಿ, ಮೊದಲ ಬಾರಿಯೇ ಗೆಲುವು ಪಡೆದೆ. ಇದುವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, 11ರಲ್ಲಿ ಗೆಲುವು ಸಾಧಿಸಿದ್ದೇನೆ. ಸಂಸದನಾಗಿ ಒಂದೂವರೆ ವರ್ಷ ಪೂರ್ಣಗೊಳಿಸಿದರೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷವಾಗುತ್ತದೆ. ಅಲ್ಲಿಗೆ ನಾನು ನಿವೃತ್ತಿಯಾಗುತ್ತೇನೆ. ರಾಜಕಾರಣದಲ್ಲಿ ಇರುವ ತನಕ ಕಪ್ಪು ಚುಕ್ಕೆ ಇಲ್ಲದಂತೆ, ಒಬ್ಬರು ಬೊಟ್ಟು ಮಾಡದಂತೆ ನಡೆದುಕೊಂಡಿದ್ದೇನೆ ಎಂದರು.
ಅಭಿವೃದ್ಧಿಗಿಂತ ಕೇವಲ ಮತಕ್ಕಾಗಿ ರಾಜಕಾರಣಿಗಳು ದಲಿತರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ಬ್ರಿಟಿಷರು ಅನುಸರಿಸುತ್ತಿದ್ದ ಒಡೆದಾಳುವ ನೀತಿಗಿಂತ ಅತ್ಯಂತ ಅಪಾಯಕಾರಿ. ದಲಿತರು ಒಗ್ಗಟ್ಟು ಮುರಿಯಲು ಅವಕಾಶ ಕೊಡಬಾರದು. ದೇಶದ ದಲಿತರ ಸ್ಥಿತಿಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿರುವೆ. ಇವತ್ತಿಗೂ ಹಳ್ಳಿಗಳಲ್ಲಿ ಪ್ರತ್ಯೇಕ ಕಾಲೋನಿಗಳಿವೆ. ನಗರಗಳಲ್ಲಿ ಸ್ಲಂಗಳಲ್ಲಿ ದಲಿತರು ಜೀವನ ನಡೆಸುತ್ತಿದ್ದಾರೆ. ಶಿಕ್ಷಣ, ಸಂಪತ್ತು, ಅಧಿಕಾರ ಇಲ್ಲದ ಈ ಸಮೂಹವನ್ನು ಯಾವ ರೀತಿ ಮುನ್ನೆಲೆಗೆ ತರಬೇಕು ಎಂಬುದರ ಕುರಿತು ಚರ್ಚಿಸಿದೆ ಎಂದು ಹೇಳಿದರು.
ಕಣ್ಣೀರು ಹಾಕಿದ ಶ್ರೀನಿವಾಸ್ ಪ್ರಸಾದ್:ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರು ಕವಿ ಸಿದ್ದಲಿಂಗಯ್ಯ ಅವರ ರಚಿತ ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ ಹಾಡನ್ನು ಹಾಡುತ್ತಿದ್ದಂತೆ ವಿ.ಶ್ರೀನಿವಾಸ್ ಪ್ರಸಾದ್ ಅವರು ದುಃಖ ತಡೆಯಲಾರದೆ ಕಣ್ಣೀರು ಹಾಕಿದರು.
ಇದನ್ನೂ ಓದಿ:ಸಕ್ರಿಯ ರಾಜಕಾರಣ ಮಾಡಲು ಆರೋಗ್ಯ ಸರಿಯಿಲ್ಲ.. ಈ ಅವಧಿ ಪೂರೈಸಿದ್ರೇ ಸಾಕು - ಸಂಸದ ವಿಶ್ರೀಪ್ರ