ಮೈಸೂರು:ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಇಂಗ್ಲಿಷ್ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ತಮ್ಮ ಇಂಗ್ಲಿಷ್ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿರುವುದಾಗಿ ಸಂಸದರು ಅಫಿಡವಿಟ್ ಮೂಲಕ ಘೋಷಣೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Prathap Simha ಎಂಬ ಹೆಸರನ್ನು Pratap Simmha ಎಂದು ಬದಲಿಸಿದ್ದಾಗಿ ತಿಳಿಸಿದ್ದಾರೆ. ಅಂದರೆ, ಪ್ರತಾಪ್ ಎಂಬ ಹಳೇ ಹೆಸರಿನಲ್ಲಿ 'H' ತೆಗೆದಿರುವ ಸಂಸದರು, ಸಿಂಹ ಎಂಬ ಹೆಸರಿನಲ್ಲಿ 'M' ಅಕ್ಷರವನ್ನು ಸೇರಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನೂ 5 ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಇಂಗ್ಲಿಷ್ನ ತಮ್ಮ ಹೆಸರಿನಲ್ಲಿ ಸಂಖ್ಯಾಶಾಸ್ತ್ರದಂತೆ ಬದಲು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ರೀತಿ ಚುನಾವಣೆ ಸಮೀಪಿಸುತ್ತಿದ್ದಂತೆ ಹೆಸರನ್ನು ಬದಲಾವಣೆ ಮಾಡಿರುವುದು ಕುತೂಹಲ ಕೆರಳಿಸಿದೆ. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಿಂಹ, ಇದೇ ಕ್ಷೇತ್ರದಿಂದ ಇದೀಗ 3ನೇ ಬಾರಿ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲೂ ಇದ್ದಾರೆ.