ಮೈಸೂರು:ಬೌದ್ಧ ಧರ್ಮದ ಬಗ್ಗೆ ಟೀಕೆ ಮಾಡಿರುವ ತಮ್ಮದೇ ಪಕ್ಷದ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ವಿರುದ್ಧ ಶಾಸಕ ಹರ್ಷವರ್ಧನ್ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ಸಚಿವ ಡಾ. ಕೆ ಸುಧಾಕರ್ ವಿರುದ್ಧ ಶಾಸಕ ಹರ್ಷವರ್ಧನ್ ಆಕ್ರೋಶ ನಂಜನಗೂಡಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೌದ್ಧ ಧರ್ಮವನ್ನು ಟೀಕೆ ಮಾಡುವ ಹಕ್ಕು ಯಾರಿಗೂ ಇಲ್ಲ. ಬೌದ್ಧ ಧರ್ಮದ ಬಗ್ಗೆ ಕೀಳಾಗಿ ಮಾತನಾಡಿರುವ ಸುಧಾಕರ್ ಅವರು ಕೂಡಲೇ ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬೌದ್ಧ ಧರ್ಮ ಪ್ರಪಂಚದಾದ್ಯಂತ ಶಾಂತಿಯನ್ನು ಸಾರುತ್ತಿದೆ. ಅಶೋಕ ಮಹಾರಾಜರು ಯುದ್ಧ ಮಾಡಿ ಎಷ್ಟೇ ತಲೆಗಳನ್ನು ಉರುಳಿಸಿದರೂ, ಕೊನೆಯಲ್ಲಿ ಬೌದ್ಧ ಧರ್ಮಕ್ಕೆ ಶರಣಾದರು. ಈ ದೇಶದ ರಾಷ್ಟ್ರ ಧ್ವಜದ ಲಾಂಛನದಲ್ಲಿರುವ ಅಶೋಕ ಚಕ್ರ ಶಾಂತಿಯ ಸಂಕೇತ. ನಮ್ಮ ದೇಶಕ್ಕೆ ಉತ್ತಮವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಸಹ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ಬೌದ್ಧ ಧರ್ಮದ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡು ಜಾಗೃತವಾಗಿ ಮಾತನಾಡಬೇಕು ಎಂದು ಸಚಿವರಿಗೆ ಹರ್ಷವರ್ಧನ್ ಸಲಹೆ ನೀಡಿದರು.
ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷದವರು ಸಚಿವ ಸುಧಾಕರ್ ಅವರ ವಿರುದ್ಧ ಧ್ವನಿಯೆತ್ತಿದರೆ ಅವರೊಂದಿಗೆ ತಾನು ಸಹ ಸಚಿವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.
ಹಿನ್ನೆಲೆ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ವಿಷಯ ಮಾತನಾಡುವಾಗ, ಸಚಿವ ಡಾ. ಕೆ.ಸುಧಾಕರ್, ಬೌದ್ಧ ಧರ್ಮವನ್ನು ಟೀಕೆ ಮಾಡಿದ್ದರು. 'ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.